ಮಾ. 11ರಂದು ‘ಹರೀಶ ವಯಸ್ಸು 36’ ಕನ್ನಡ ಚಲನಚಿತ್ರ ತೆರೆಗೆ
ಮಂಗಳೂರು, ಮಾ.9: ಶಿರ್ಡಿಸಾಯಿ ಬಾಲಾಜಿ ಫಿಲ್ಮ್ ಬ್ಯಾನರ್‌ನಡಿ ಮೂಡಿಬಂದ ‘ಹರೀಶ ವಯಸ್ಸು 36’ ಕನ್ನಡ ಚಲನಚಿತ್ರ ಮಾ.11 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಲನಚಿತ್ರದ ನಿರ್ದೇಶಕ ಗುರುರಾಜ್ ಜ್ಯೇಷ್ಠ ಅವರು, ಗುರುವಾಯನಕೆರೆ ಮತ್ತು ಮಂಗಳೂರಿನ ಪರಿಸರದಲ್ಲಿ ಈ ಚಿತ್ರ ಚಿತ್ರೀಕರಣಗೊಂಡಿದ್ದು, ಚಿತ್ರದ ಸುಮಧುರ ಸಂಗೀತಕ್ಕೆ ಮಂಗಳೂರು ಕನ್ನಡದ ಕಂಪು ಸಾಥ್ ನೀಡಿದೆ. ಕಥೆಯ ಮುಖ್ಯ ಭಾಗವಾಗಿ ಕಥಾನಾಯಕ ಹಗಲುಗನಸು ಕಾಣುವ ಕನಸು ಕಂಗಳ ಹುಡುಗ. ಉಂಡಾಡಿ ಗುಂಡ ಹರೀಶನು ಹುಡುಗಿನ ಅನ್ವೇಷಣೆಯಲ್ಲಿ ಇರುತ್ತಾನೆ. ಅವನ ಜೀವನದಲ್ಲಿ ನಡೆಯುವ ತಿರುವುಗಳನ್ನು ಕತೆಯಾಗಿ ಹೆಣೆದು ಎಲ್ಲಾ ವಯೋಮಾನದ ಪ್ರೇಕ್ಷಕರಿಗಾಗಿ ನಿರ್ಮಿಸಿರುವ ಕೌಂಟುಂಬಿಕ ಚಲನಚಿತ್ರ ಇದಾಗಿದೆ ಎಂದು ಹೇಳಿದರು.
ಈ ಚಲನಚಿತ್ರಕ್ಕೆ ಲಕ್ಷ್ಮೀಕಾಂತ್, ಎಚ್.ವಿ. ರಾವ್, ತ್ರಿಲೋಕ್ ಝಾ, ಚಿಂತಕುಂಟ ಶ್ರೀದೇವಿ, ಆರ್. ದೀಪಾ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದು, ಹಿರಿಯ ಕಲಾವಿದರಾದ ಎಂ.ಎಸ್. ಉಮೇಶ್, ಯೋಗೀಶ್ ಶೆಟ್ಟಿ, ಶ್ವೇತಾ ಅರೆಹೊಳೆ, ರೋಹಿಣಿ ಜಗರಾಮ್, ಪ್ರಕಾಶ್ ತೂಮಿನಾಡು, ರಕ್ಷಣ್ ಮಾಡೂರು, ಶೋಭಾ ಶೆಟ್ಟಿ, ಉಮೇಶ್ ಮಿಜಾರ್, ಮಂಜುಳಾ ಜನಾರ್ಧನ್, ರಮೇಶ್ ರೈ ಕುಕ್ಕುವಳ್ಳಿ, ಸೌಮ್ಯ ಸುಧೀಂದ್ರ ಮತ್ತಿತರರ ತಾರಾಗಣವಿದೆ. ಈ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡಿರುವ ಹಾಡು ಸೇರಿದಂತೆ ಒಟ್ಟು 4 ಹಾಡುಗಳಿವೆ. ಅಕ್ಷತ್ ವಿಟ್ಲ ಸಹನಿರ್ದೇಶನವಿದ್ದು, ಸಹಾಯಕ ನಿರ್ದೇಶಕರಾಗಿ ವಿಷ್ಣು ಜಿ., ನಿಶಿತ್ ಶೆಟ್ಟಿ, ರಂಜಿತ್ ಅಡ್ಯನಡ್ಕ ಗುರುತಿಸಿಕೊಂಡಿದ್ದಾರೆ. ಮೋಹನ್ ಪಡ್ರೆ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಗುರುರಾಜ್ ಜ್ಯೇಷ್ಠ ಅವರ ಸಂಗೀತವಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯೋಗೀಶ್ ಶೆಟ್ಟಿ, ಶ್ವೇತಾ ಅರೆಹೊಳೆ, ರಕ್ಷಣ್ ಮಾಡೂರು, ಸೌಮ್ಯ ಸುಧೀಂದ್ರ ರಾವ್ ಇದ್ದರು.







