ಭಾರತಕ್ಕೆ ಆಗಮಿಸಿದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ನಡೆಯಲಿ

ಒಂದೆಡೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ಬಿರುಸಿನಿಂದ ಸಾಗುತ್ತಿದೆ. ತೀರಾ ತಡವಾಗಿ ಎಚ್ಚೆತ್ತುಕೊಳ್ಳುವುದು ಸರಕಾರದ ಸಂಪ್ರದಾಯವೇ ಆಗಿರುವುದರಿಂದ, ಅವರನ್ನು ಸಂಪೂರ್ಣ ತೆರವುಗೊಳಿಸುವುದು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸುವುದು ಬಹುತೇಕ ಖಚಿತವಾಗಿದ್ದರಿಂದ ಯುದ್ಧಕ್ಕೆ ಮುನ್ನವೇ ವಿದ್ಯಾರ್ಥಿಗಳನ್ನು ಗಡಿಭಾಗಕ್ಕೆ ಕರೆಸಿಕೊಳ್ಳುವ ಕೆಲಸವಾದರೂ ನಡೆಯಬೇಕಾಗಿತ್ತು. ಆದರೆ ರಾಯಭಾರ ಕಚೇರಿಯ ನಿರ್ಲಕ್ಷದಿಂದ ಇದು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಉಕ್ರೇನ್ ವಿಶ್ವವಿದ್ಯಾನಿಲಯಗಳು ಕೂಡ ವಿದ್ಯಾರ್ಥಿಗಳನ್ನು ಬ್ಲಾಕ್‌ಮೇಲ್ ಮಾಡಿತು. ಯುದ್ಧದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ, ಅದು ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮಗಳನ್ನು ಊಹಿಸಿಕೊಂಡು ‘ಆನ್‌ಲೈನ್ ತರಗತಿ’ಯನ್ನು ತಾತ್ಕಾಲಿಕವಾಗಿ ಘೋಷಿಸಬೇಕಾಗಿತ್ತು. ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಒತ್ತಾಯಿಸಿದರೂ ಅದಕ್ಕೆ ಕಿವಿಗೊಡದ ವಿಶ್ವವಿದ್ಯಾನಿಲಯಗಳು ಆಫ್‌ಲೈನ್ ತರಗತಿಯನ್ನೇ ಮುಂದುವರಿಸಿಕೊಂಡು ಹೋಯಿತು. ವಿದ್ಯಾರ್ಥಿಗಳ ಮುಂದೆ ಅತ್ತ ದರಿ-ಇತ್ತ ಪುಲಿ ಎನ್ನುವಂತಹ ಸನ್ನಿವೇಶ. ಕನಿಷ್ಠ ರಾಯಭಾರ ಕಚೇರಿ ಸ್ಪಷ್ಟ ಮಾತಿನಲ್ಲಿ ‘ತಕ್ಷಣ ಗಡಿಭಾಗಕ್ಕೆ ತೆರಳಿ’ ಎಂಬ ಆದೇಶ ನೀಡಿದ್ದರೂ, ವಿದ್ಯಾರ್ಥಿಗಳು ಪರಿಸ್ಥಿತಿಯನ್ನು ಊಹಿಸಿಕೊಂಡು ಭಾರತ ಸೇರುತ್ತಿದ್ದರು. ರಾಯಭಾರವೂ ಈ ಸ್ಪಷ್ಟ ಆದೇಶವನ್ನು ನೀಡಲಿಲ್ಲ. ಉಕ್ರೇನ್ ದೇಶಕ್ಕೆ ವಿದೇಶಿ ವಿದ್ಯಾರ್ಥಿಗಳು ತನ್ನ ನೆಲದಲ್ಲಿ ಇದ್ದಷ್ಟು ಹೆಚ್ಚು ಅನುಕೂಲ. ಅವರನ್ನು ಗುರಾಣಿಯಾಗಿ ಬಳಸಿಕೊಳ್ಳಬಹುದು. ವಿದೇಶಿ ರಾಷ್ಟ್ರಗಳು ರಶ್ಯದ ಮೇಲೆ ತಮ್ಮ ವಿದ್ಯಾರ್ಥಿಗಳಿಗಾಗಿ ಒತ್ತಡ ಹಾಕುತ್ತವೆ. ಆದುದರಿಂದ, ವಿದ್ಯಾರ್ಥಿಗಳನ್ನು ಆಯಾ ದೇಶಗಳಿಗೆ ತೆರಳದಂತೆ ನೋಡಿಕೊಳ್ಳುವಲ್ಲಿ ಉಕ್ರೇನ್ ಸರಕಾರದ ಪಾತ್ರವೂ ಇದೆ. ಅಂತಿಮವಾಗಿ ಈ ಎಲ್ಲ ರಾಜಕಾರಣಗಳಿಗೆ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಯಿತು.
ಕೊನೆಯ ಕ್ಷಣದಲ್ಲಾದರೂ ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಅದಕ್ಕಾಗಿ ನಾವು ಸರಕಾರವನ್ನು ಅಭಿನಂದಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ತಮಗೆ ಸೂಕ್ತ ಸಮಯದಲ್ಲಿ ನೆರವು ನೀಡಲಿಲ್ಲ ಎನ್ನುವ ಅಸಮಾಧಾನ ವಿದ್ಯಾರ್ಥಿಗಳಲ್ಲಿದೆ. ಇಂತಹ ಅಸಮಾಧಾನ ಸಹಜವೂ ಆಗಿದೆ. ಅಸಮಾಧಾನಕ್ಕೆ ಮೊದಲ ಕಾರಣ, ಅವರು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾದುದು ಭಾರತದ ಶಿಕ್ಷಣ ವ್ಯವಸ್ಥೆಯಿಂದ. ಪೇಮೆಂಟ್ ಸೀಟಿನ ಮೂಲಕ ಅನರ್ಹರೆಲ್ಲ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಸರ್ವ ರೀತಿಯ ಅರ್ಹತೆಯಿದ್ದೂ, ನೀಟ್ ರ್ಯಾಂಕಿನ ಒಳಗಿಲ್ಲ ಎನ್ನುವ ಕಾರಣಕ್ಕಾಗಿ ಅವರು ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಅರ್ಹತೆಯನ್ನು ಕಳೆದುಕೊಂಡರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇಶದಲ್ಲಿ ವೈದ್ಯಕೀಯ ಕಲಿಯುವಷ್ಟು ಆರ್ಥಿಕವಾಗಿ ಅವರು ಸಶಕ್ತರಲ್ಲ. ಈ ಕಾರಣದಿಂದ ಅವರು ಉಕ್ರೇನ್‌ನಂತಹ ಭಾಷೆಯೇ ಗೊತ್ತಿಲ್ಲದ ಸಣ್ಣ ದೇಶದಲ್ಲಿ ಶಿಕ್ಷಣ ಪಡೆಯುವ ಸನ್ನಿವೇಶ ನಿರ್ಮಾಣವಾಯಿತು. ವೈದ್ಯರಾಗುವ ಒಂದೇ ಒಂದು ಕನಸಿಗಾಗಿ ತಮ್ಮ ಮನೆ, ಬಂಧುಗಳನ್ನು ಬಿಟ್ಟು ವರ್ಷಗಟ್ಟಲೆ ವಿದೇಶದಲ್ಲಿ ಕಳೆಯಬೇಕಾದ ಇವರ ಸ್ಥಿತಿಯನ್ನೊಮ್ಮೆ ಊಹಿಸೋಣ. ಇಂತಹ ಸಂದರ್ಭದಲ್ಲಿ ಯುದ್ಧ ಘೋಷಣೆಯಾಯಿತು. ಈ ಸಂದರ್ಭದಲ್ಲಾದರೂ ಭಾರತ ತಮಗೆ ಸೂಕ್ತ ಸಮಯದಲ್ಲಿ ನೆರವಾಗಬಹುದು ಎಂದು ಭಾವಿಸಿದ್ದರು. ಆದರೆ ಅದಕ್ಕೆ ಬದಲಾಗಿ, ‘ಅಷ್ಟು ದೂರ ಭಾಷೆ ಗೊತ್ತಿಲ್ಲದ ಸಣ್ಣ ದೇಶದಲ್ಲಿ ಯಾಕೆ ಶಿಕ್ಷಣ ಕಲಿಯಲು ಹೋದಿರಿ?’ ಎನ್ನುವ ಬಾಲಿಶ ಪ್ರಶ್ನೆಯನ್ನು ಪ್ರಧಾನಿಯೇ ಕೇಳಿದರು. ಗಾಯಕ್ಕೆ ಬರೆ ಎಳೆಯುವಂತೆ ‘ವಿದೇಶದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲ ನೀಟ್‌ನಲ್ಲಿ ಅನರ್ಹರಾದವರು’ ಎನ್ನುವ ಬೇಜವಾಬ್ದಾರಿ ಮಾತುಗಳನ್ನು ಜನಪ್ರತಿನಿಧಿಗಳು ಆಡಿದರು. ಒಂದೆಡೆ ತಮ್ಮ ಕನಸುಗಳ ಭಗ್ನವಾದ ಹತಾಶೆ.
ಇನ್ನೊಂದೆಡೆ ಭಾರತ ತನ್ನನ್ನು ಕರೆದೊಯ್ಯಬೇಕಾದರೆ ಗಡಿಭಾಗಕ್ಕೆ ತೆರಳಬೇಕು. ಎರಗುತ್ತಿರುವ ಕ್ಷಿಪಣಿ ದಾಳಿಗಳ ನಡುವೆಯೇ ನೂರಾರು ಕಿಲೋ ಮೀಟರ್ ಪ್ರಯಾಣಿಸಿ ಅವರು ಗಡಿ ಭಾಗಕ್ಕೆ ತಲುಪಿರುವುದೇ ಬಹುದೊಡ್ಡ ಸಾಹಸ. ಈ ಸಂದರ್ಭದಲ್ಲಿ ಅವರು ಎದುರಿಸಿದ ಅವಮಾನ, ಆತಂಕ, ಜೀವಭಯವನ್ನು ನಾವೊಮ್ಮೆ ಕಲ್ಪಿಸಿಕೊಳ್ಳೋಣ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಗುರಿ ತಲುಪಿದ ಎಲ್ಲ ವಿದ್ಯಾರ್ಥಿಗಳು ಯೋಧರು ಪ್ರದರ್ಶಿಸಬೇಕಾದ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಇಂತಹ ಸವಾಲನ್ನು ಗೆದ್ದು ಬಂದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ಸರಕಾರದ ಕೆಲಸವಾಗಿದೆ. ಆದರೆ ಸರಕಾರ, ವಿದ್ಯಾರ್ಥಿಗಳಿಂದಲೇ ಕೃತಜ್ಞತೆಗಳನ್ನು ನಿರೀಕ್ಷಿಸುತ್ತಿದೆ. ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿಲ್ಲ, ಬದಲಿಗೆ ಸರಕಾರವನ್ನು ಟೀಕಿಸಿದರು ಎನ್ನುವ ಕಾರಣಕ್ಕಾಗಿ ಅವರ ವಿರುದ್ಧ ಕೆಲವರು ಟೀಕೆಗಳ ಸುರಿಮಳೆಗಳನ್ನು ಸುರಿಸುತ್ತಿದ್ದಾರೆ. ಇದು ನಿಜಕ್ಕೂ ನಮ್ಮಾಳಗಿನ ಹೀನ ಮನಸ್ಸನ್ನು ಹೇಳುತ್ತದೆ. ನಾವಿಂದು ಅವರಿಗೆ ನೀಡಬೇಕಾದುದು ಅಭಿನಂದನೆಗಳನ್ನು. ಜೊತೆಗೆ ಅವರಿಗೆ ಸಂತೈಕೆಯನ್ನು ನೀಡಬೇಕು. ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬೇಕು. ಇದು ನಮ್ಮ ಕರ್ತವ್ಯ. ‘ವಾಪಸಾದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ರಾಜ್ಯದ ಸಚಿವ ಸುಧಾಕರ್ ಹೇಳಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ಹೇಳಿಕೆ.
ಇಂದು ದೇಶದಲ್ಲಿ ಚರ್ಚೆಯಾಗಬೇಕಾಗಿರುವುದು, ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳ ಹೇಳಿಕೆಗಳಲ್ಲ. ಯಾಕೆಂದರೆ ಅವರ ರಕ್ಷಣೆಯ ಹೊಣೆಗಾರಿಕೆ ಇನ್ನೂ ಮುಗಿದಿಲ್ಲ. ಉಕ್ರೇನ್‌ನಿಂದ ಭಾರತಕ್ಕೆ ಬಂದಾಕ್ಷಣ ಅವರ ಸಮಸ್ಯೆಗಳು ಮುಗಿಯುವುದಿಲ್ಲ. ಬದಲಾಗಿ ಹೊಸದಾಗಿ ತೆರೆದುಕೊಳ್ಳುತ್ತದೆ. ಉಕ್ರೇನ್‌ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋದವರಾರು ಶ್ರೀಮಂತವರ್ಗದವರಲ್ಲ. ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರು. ಇವರಲ್ಲಿ ಅನೇಕರು ಜಮೀನು ಮಾರಿ, ಸಾಲ ಸೋಲ ಮಾಡಿ ಹೋದವರಿದ್ದಾರೆ. ಇದೀಗ ಅವರ ಕನಸಿನ ಜೊತೆ ಜೊತೆಗೆ ಅವರ ಹಣವೂ ಕೂಡ ಯುದ್ಧ ಭೂಮಿಯಲ್ಲಿ ಬೂದಿಯಾಗಿದೆ. ಎಲ್ಲವನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕಂತೂ ಕಾಲೇಜುಗಳು ತೆರೆಯುವ ಸಾಧ್ಯತೆಗಳಿಲ್ಲ. ಬಂದ ವಿದ್ಯಾರ್ಥಿಗಳು ಹತಾಶೆಯಿಂದ ಖಿನ್ನತೆಗೊಳಗಾಗುವ ಸಾಧ್ಯತೆಗಳಿವೆ. ಭವಿಷ್ಯದ ವೈದ್ಯರಾಗಬೇಕಾಗಿದ್ದ ಸಾವಿರಾರು ಯುವಕರು ಮನೆಯಲ್ಲಿ ಹತಾಶರಾಗಿ ಕುಳಿತುಕೊಳ್ಳಬೇಕಾಗುತ್ತದೆ. ಮೊತ್ತ ಮೊದಲಾಗಿ ಇವರೆಲ್ಲರಿಗೂ ಸರಕಾರ ಆರ್ಥಿಕ ನೆರವನ್ನು ನೀಡಬೇಕಾಗಿದೆ.
ಒಬ್ಬ ಮೃತ ಕ್ರಿಮಿನಲ್‌ನ ಕುಟುಂಬಕ್ಕೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಲು ಶಕ್ತವಾಗಿರುವ ರಾಜ್ಯ ಖಂಡಿತವಾಗಿಯೂ ಈ ಪ್ರತಿಭಾವಂತ ವಿದ್ಯಾರ್ಥಿಗಳ ಕೈ ಬಿಡಲಾರದು ಎನ್ನುವುದು ಎಲ್ಲರ ಭರವಸೆಯಾಗಿದೆ. ಉಕ್ರೇನ್‌ನಲ್ಲಿ ಪರಿಸ್ಥಿತಿ ಸರಿಯಾಗದೇ ಇದ್ದರೆ ಇವರಿಗೆ ಭಾರತದಲ್ಲಿ ಹೆಚ್ಚಿನ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವ ಬಗ್ಗೆಯೂ ಸರಕಾರ ಚಿಂತಿಸಬೇಕಾಗಿದೆ. ಎಲ್ಲ ಪೋಷಕರನ್ನು ಕರೆದು ಅವರ ಜೊತೆಗೆ ಮಾತುಕತೆ ನಡೆಸಿ ಅವರಿಗೆ ಭರವಸೆ ತುಂಬುವ ಕೆಲಸ ಮುಖ್ಯಮಂತ್ರಿ ಬೊಮ್ಮಾಯಿಯಿಂದ ನಡೆಯಬೇಕು. ಹಾಗೆಯೇ ಹತಾಶೆಯಲ್ಲಿರುವ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿ, ಅವರಿಗೆ ಸೂಕ್ತ ಭರವಸೆ ನೀಡಿ ಅವರಲ್ಲಿ ಆತ್ಮ ವಿಶ್ವಾಸ ಕುಸಿಯದಂತೆಯೂ ನೋಡಿಕೊಳ್ಳಬೇಕು. ಇದು ಸರಕಾರ ಮಾಡಬೇಕಾದ ತುರ್ತು ಕೆಲಸವಾಗಿದೆ.







