ಅಕ್ರಮ ಸಕ್ರಮ ಯೋಜನೆ ಪ್ರಚಾರಕ್ಕೆ ಮೀಸಲೇ?
ಮಾನ್ಯರೇ,
ಕರ್ನಾಟಕ ಸರಕಾರವು ಘೋಷಣೆ ಮಾಡಿರುವ ಅಕ್ರಮ ಸಕ್ರಮ ಯೋಜನೆ ಬಗ್ಗೆ ಕಂದಾಯ ಸಚಿವರಾದ ಅಶೋಕ್‌ರವರು ಸುದ್ದಿಗೋಷ್ಠಿ ಮಾಡುವುದನ್ನು ನೋಡಿದಾಗ ಬಡವರ ಕಣ್ಣಲ್ಲಿ ಆಶಾಕಿರಣ ಮೂಡುತ್ತದೆ. ಮನದಲ್ಲಿ ನಮಗೂ ಒಂದು ಸ್ವಂತ ಸೂರು ಆಗುತ್ತದೆ ಎಂಬ ಆಸೆ ಮನೆ ಮಾಡುತ್ತದೆ. ಮಾತ್ರವಲ್ಲ ಕಂದಾಯ ಸಚಿವರು ಮಾರ್ಚ್ 2022ರವರೆಗೂ ಕೊನೆಯ ಅವಧಿ ಇದೆ ಎಂದು ಹೇಳಿದ್ದಾರೆ. ಆದರೆ ಸರಕಾರದ ಈ ಘೋಷಣೆ ಕೇವಲ ಮಾಧ್ಯಮಗಳಿಗೆ ಮಾತ್ರ ಮೀಸಲು, ಕಾರ್ಯರೂಪದಲ್ಲಿ ಅಲ್ಲ ಅನಿಸುತ್ತದೆ. ಈ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯತ್ ಕೊಟ್ಟ ಉತ್ತರ ಸರಕಾರದ ಕಣ್ಣೊರೆಸುವ ತಂತ್ರವನ್ನು ಬಯಲು ಮಾಡುತ್ತದೆ.
ಈ ಪಟ್ಟಣ ಪಂಚಾಯತ್‌ನವರಿಗೆ ಅಕ್ರಮ ಸಕ್ರಮ ಘೋಷಣೆ ತಮ್ಮ ಕಾರ್ಯಾಲಯಕ್ಕೆ ಸಂಬಂಧ ಪಡುವುದೇ?, ಯಾವ ಯಾವ ಸ್ಥಳದಲ್ಲಿ ಕಟ್ಡಿದ ಕಟ್ಟಡಗಳು ಸಕ್ರಮವಾಗುತ್ತವೆ? ಮತ್ತು ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದವರ ವಿವರ ಕೇಳಲಾಗಿತ್ತು. ಪಟ್ಟಣ ಪಂಚಾಯಿತ್‌ನವರು ಮಾಹಿತಿ ಹಕ್ಕಿನಡಿ ಒದಗಿಸಿರುವ ಉತ್ತರ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಜಾರಿಗೊಳಿಸಲು ಇದುವರೆಗೂ ಯಾವುದೇ ಆದೇಶ/ಸುತ್ತೋಲೆ ಬಂದಿರುವುದಿಲ್ಲ. ಅರ್ಜಿಗಳನ್ನೂ ಸ್ವೀಕರಿಸಿರುವುದಿಲ್ಲ.
ಇದು ಬಡವರಿಗೆ ಸರಕಾರ ಮಾಡುತ್ತಿರುವ ದ್ರೋಹವಲ್ಲವೇ? ಮಾರ್ಚ್ ಮುಗಿಯಲು ಕೆಲವುದಿನಗಳು ಮಾತ್ರ ಇವೆ. ಹಾಗಾದರೆ ಸರಕಾರ ತೆಗೆದುಕೊಳ್ಳುವ ಕ್ರಮವೇನು? ಮಾನ್ಯ ಕಂದಾಯ ಸಚಿವರೇ ಉತ್ತರಿಸಬೇಕು!





