ಬಲಪ್ರಯೋಗಿಸಿ ಭಿನ್ನಾಭಿಪ್ರಾಯ ಹತ್ತಿಕ್ಕುತ್ತಿರುವ ಬೆಲಾರಸ್: ವಿಶ್ವಸಂಸ್ಥೆ ವರದಿ

ನ್ಯೂಯಾರ್ಕ್, ಮಾ.9: ಬೆಲಾರಸ್‌ನಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲಾಗುತ್ತಿದೆ ಮತ್ತು ಮಾನವ ಹಕ್ಕು ವಂಚಿತರು ನ್ಯಾಯದ ನೆರೆವು ಪಡೆಯುವ ಮಾರ್ಗವನ್ನು ತಡೆಯಲಾಗಿದೆ. ಶಿಕ್ಷೆಯ ಭೀತಿಯಿಲ್ಲದ ಪರಿಸ್ಥಿತಿ ಆ ದೇಶದಲ್ಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಬೆಲಾರಸ್ ಸರಕಾರವು ವಿರೋಧಿಗಳ, ಮಾಧ್ಯಮ ಹಾಗೂ ಇತರರ ಮೇಲಿನ ದಮನವನ್ನು ಮುಂದುವರಿಸಿದ್ದು ಕಾನೂನನ್ನು ದುರುಪಯೋಗ ಪಡಿಸುತ್ತಿರುವ ಅಪರಾಧಿಗಳು ಉತ್ತರದಾಯಿತ್ವದಿಂದ ವಿನಾಯಿತಿ ಪಡೆದಿದ್ದಾರೆ ಎಂದು ದೇಶದೊಳಗಿನ ಪರಿಸ್ಥಿತಿಯ ಕುರಿತು ಬುಧವಾರ ಪ್ರಕಟವಾದ ಹೊಸ ವರದಿಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಅಧ್ಯಕ್ಷೆ ಮಿಶೆಲ್ ಬ್ಯಾಚ್ಲೆಟ್ ಉಲ್ಲೇಖಿಸಿದ್ದಾರೆ. ಜನರ ಮೂಲಭೂತ ಹಕ್ಕು ಚಲಾವಣೆಯ ಅಧಿಕಾರವನ್ನೂ ನಿಷೇಧಿಸಲಾಗಿದೆ ಮತ್ತು ಸಂತ್ರಸ್ತರು ನ್ಯಾಯ ಪಡೆಯುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು, ನಾಗರಿಕ ಸಮಾಜ, ಸ್ವತಂತ್ರ್ಯ ಮಾಧ್ಯಮ ಮತ್ತು ವಿರೋಧ ಗುಂಪುಗಳನ್ನು ನಿಗ್ರಹಿಸಲು ಅಧಿಕಾರಿಗಳ ವ್ಯಾಪಕ ಮತ್ತು ನಿರಂತರ ಉಪಕ್ರಮಗಳು ಮತ್ತು ಅದೇ ಸಮಯದಲ್ಲಿ ಅಪರಾಧಿಗಳಿಗೆ ಅಭಯ ನೀಡುವ ಕ್ರಮದಿಂದಾಗಿ ಬೆಲಾರಸ್ನಲ್ಲಿ ಅಪರಾಧಿಗಳಿಗೆ ಸಂಪೂರ್ಣ ನಿರ್ಭಯದ ಪರಿಸ್ಥಿತಿ ನೆಲೆಸಿದೆ ಎಂದು ವರದಿ ಹೇಳಿದೆ. 2020ರ ಆಗಸ್ಟ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಿಂದ 2021ರ ಡಿಸೆಂಬರ್ವರೆಗಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ವರದಿ ತಯಾರಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ಅಲೆಕ್ಸಾಂಡರ್ ಲುಕಶೆಂಕೊ ಮತ್ತೊಂದು ಅವಧಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಫಲಿತಾಂಶವನ್ನು ವಿರೋಧಿಸಿ ದೇಶದೆಲ್ಲೆಡೆ ಭುಗಿಲೆದ್ದ ಪ್ರತಿಭಟನೆಯನ್ನು ಅನಗತ್ಯ ಮತ್ತು ಅಸಮಾನ ಬಲವನ್ನು ಪ್ರಯೋಗಿಸಿ ಹಿಂಸಾತ್ಮಕ ರೀತಿಯಲ್ಲಿ ಹತ್ತಿಕ್ಕಲಾಗಿದ್ದು, 2020ರ ಮೇ ತಿಂಗಳಿಂದ 2021ರ ಮೇ ವರೆಗಿನ ಅವಧಿಯಲ್ಲಿ ಕನಿಷ್ಟ 37,000 ಜನರನ್ನು ಬಂಧನದಲ್ಲಿಡಲಾಗಿದೆ ಎಂದು ವರದಿ ಹೇಳಿದೆ. 2021ರ ಅಂತ್ಯದಲ್ಲಿ ರಾಜಕೀಯ ಪ್ರೇರಿತ ಪ್ರಕರಣದಲ್ಲಿ 969 ಮಂದಿ ಜೈಲಿನಲ್ಲಿದ್ದು ಇನ್ನೂ ಹಲವರಿಗೆ 10 ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಯ ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ಹೇಳಿದೆ.





