ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ನೂತನ ಕಚೇರಿ, ಆ್ಯಂಬುಲೆನ್ಸ್ ಸೇವೆ ಉದ್ಘಾಟನೆ

ಮಂಗಳೂರು : ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಸ್ಥಳಾಂತರಗೊಂಡ ನೂತನ ಕಚೇರಿ ಮತ್ತು ಮಾಹಿತಿ ಕೇಂದ್ರದ ಉದ್ಘಾಟನೆ ಹಾಗೂ ಸಂಸ್ಥೆಯ ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆ ಕಾರ್ಯಕ್ರಮ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಇರುವ ಸಹಕಾರಿ ಸದನ ಸಂಕೀರ್ಣದಲ್ಲಿ ನಡೆಯಿತು.
ಸಂಸ್ಥೆಯ ನೂತನ ಕಚೇರಿಯನ್ನು ಜಮೀಯತುಲ್ ಫಲಾಹ್ ಮಂಗಳೂರು ನಗರ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಅವರು ಉದ್ಘಾಟಿಸಿ, ಶುಭ ಹಾರೈಸಿದರು.
ನೂತನ ಆ್ಯಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿ, ಮಾತನಾಡಿದ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದ್ದು, ಸರಕಾರದ ಯೋಜನೆಗಳು ಅರ್ಹರಿಗೆ ತಲುಪಲು ಇಂತಹಾ ಮಾಹಿತಿ ಮತ್ತು ಸೇವಾ ಕೇಂದ್ರ ತುಂಬಾ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷರಾದ ನಝೀರ್ ಅಹ್ಮದ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ ಅವರು ಸಂಸ್ಥೆಯ ಹೊಸ ವೆಬ್ ಸೈಟ್ ಗೆ ಚಾಲನೆ ನೀಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ 'ಮೀಫ್' ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಮೂಸಬ್ಬ ಬ್ಯಾರಿ ಅವರು ಸಂಸ್ಥೆಯ ವಿದ್ಯಾರ್ಥಿವೇತನ ತಂತ್ರಾಂಶಕ್ಕೆ ಚಾಲನೆ ನೀಡಿ, ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯಾದ ಉದ್ಯೋಗ ಮೇಳಕ್ಕೆ ಉಭಯ ಜಿಲ್ಲೆಗಳಲ್ಲಿರುವ 'ಮೀಫ್' ನೋಂದಾಯಿತ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ದೊರಕಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ನಝೀರ್ ಸ್ವಾಗತಿಸಿ, ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಪರಿಚಯಿಸಿದರು.
ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ವಂದಿಸಿದರು.