ಸಂಸದೆ ಸುಮಲತಾ ಅಂಬರೀಶ್ ಕಾರಿನ ಚಾಲಕನಿಗೆ ಹಲ್ಲೆ ಆರೋಪ: ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲು

ಮೈಸೂರು: ಸಂಸದರ ನಿಧಿಯಿಂದ ಮಂಜೂರಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಲು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ತೆರಳಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಅಡ್ಡಿಪಡಿಸಿದ ಶಾಸಕ ಸಾ.ರಾ.ಮಹೇಶ್ ಬೆಂಬಲಿಗರು ಎನ್ನಲಾದ ಜೆಡಿಎಸ್ ಕಾರ್ಯಕರ್ತರು ಸಂಸದೆಯ ಕಾರು ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಸಂಬಂಧ ಸಂಸದೆ ಸುಮಲತಾ ಅಂಬರೀಶ್ ಖುದ್ದು ಸಾಲಿಗ್ರಾಮ ಪೊಲೀಸ್ ಠಾಣೆಗೆ ತರೆಳಿ ಹಲ್ಲೆ ನಡೆಸಲು ಯತ್ನಿಸಿದ ಮತ್ತು ನನ್ನ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲು ಮಾಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಮಂಜನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಬಾಕ್ಸ್ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಸಂಸದೆ ಸುಮಲತಾ ಅಂಬರೀಶ್ ತೆರಳಿದ್ದರು. ಈ ವೇಳೆ ನಮ್ಮ ಶಾಸಕ ಸಾ.ರಾ.ಮಹೇಶ್ ಅವರನ್ನು ಏಕೆ ಆಹ್ವಾನಿಸಿಲ್ಲ ಎಂದು ಅವರ ಬೆಂಬಲಿಗರು ಎನ್ನಲಾದ ಜೆಡಿಎಸ್ ಕಾರ್ಯಕರ್ತರು ಗುದ್ದಲಿ ಪೂಜೆಗೆ ಅಡ್ಡಿ ಪಡಿಸಿದ್ದಾರೆ. ಗುದ್ದಲಿ ಪೂಜೆಗೆ ಹಾಕಲಾಗಿದ್ದ ಶಾಮೀಯಾನವನ್ನು ಕಿತ್ತೆಸದ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.
ಈ ವೇಳೆ ಸುಮಲತಾ ಬೆಂಬಲಿಗರು ಜಯಕಾರ ಹಾಕಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಮತ್ತು ಶಾಸಕ ಸಾ.ರಾ.ಮಹೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಸುವ ಹಂತಕ್ಕೂ ತಲುಪಿತು ಎನ್ನಲಾಗಿದೆ.
ಈ ವೇಳೆ ಶಾಸಕ ಸಾ.ರಾ.ಮಹೇಶ್ ಬೆಂಬಲಿಗರು ಎನ್ನಲಾದ ಜೆಡಿಎಸ್ ಕಾರ್ಯಕರ್ತರು ಸಂಸದೆ ಸುಮಲತಾ ಅಂಬರೀಶ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸುಮಲತಾರ ಬೆಂಬಲಕ್ಕೆ ನಿಂತಿದ್ದ ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.







