ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ಶಿಕ್ಷಣ: ಯುಜಿಸಿ ನಿರ್ಧಾರ

PHOTO PTI
ಹೊಸದಿಲ್ಲಿ, ಮಾ.9: ಭಾರತೀಯ ಭಾಷೆಗಳಲ್ಲಿ ಹಲವಾರು ಕೋರ್ಸ್ಗಳನ್ನು ಜಾರಿಗೊಳಿಸಿದ ಬಳಿಕ, ಭಾರತ ಸರಕಾರವು ಈ ಅವಕಾಶವನ್ನು ದೇಶಾದ್ಯಂತದ ಕಾನೂನು ಕಾಲೇಜುಗಳಿಗೂ ವಿಸ್ತರಿಸಲು ನಿರ್ಧರಿಸಿದೆ. ಕಾನೂನು ಶಿಕ್ಷಣದ ಕೋರ್ಸ್ಗಳನ್ನು ನಡೆಸುತ್ತಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಈ ಬಗ್ಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಈಗಾಗಲೇ ಸಮಾಲೋಚನೆಯನ್ನು ಆರಂಭಿಸಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯು ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಕಲಿಕಾ ಮಾಧ್ಯಮವಾಗಿ ಜಾರಿಗೊಳಿಸುವ ಪ್ರಸ್ತಾವನೆಯನ್ನು ಮಾಡಿದ್ದು, ಅದನ್ನು ಅನುಷ್ಟಾನಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಈ ನಡೆಯನ್ನು ಇರಿಸಲಾಗಿದೆಯೆಂದು ಮೂಗಳು ಹೇಳಿವೆ.
ಕಳೆದ ವರ್ಷ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಏಐಸಿಟಿಇ)ಯು 19 ತಾಂತ್ರಿಕಶಿಕ್ಷಣ ಕಾಲೇಜುಗಳಿಗೆ ಪ್ರಾದೇಶಿ ಭಾಷೆಗಳಲ್ಲಿ ಶಿಕ್ಷಣ ನೀಡಲು ಸಾಧ್ಯವಿರುವಂತಹ ಎಂಜಿನಿಯರಿಂಗ್ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಿತ್ತು. ಈ ಪೈಕಿ 10 ತಾಂತ್ರಿಕ ಶಿಕ್ಷಣ ಕಾಲೇಜ್ಗಳು ಹಿಂದಿಯನ್ನು ಆಯ್ಕೆ ಮಾಡಿಕೊಂಡರೆ, ಉಳಿದವು ಮರಾಠಿ, ಬಂಗಾಳಿ, ತಮಿಳು, ತೆಲುಗು ಹಾಗೂ ಕನ್ನಡವನ್ನು ಆಯ್ದುಕೊಂಡಿದ್ದವು.
ಕಾನೂನು ಶಿಕ್ಷಣದ ಕೋರ್ಸ್ಗಳೊಂದಿಗೆ ಯುಜಿಸಿಯು ಪ್ರಾದೇಶಿಕ ಭಾಷೆಗಳಲ್ಲಿ ಪೂರ್ಣಮಟ್ಟದ ಪದವಿ ಕೋರ್ಸ್ಗಳನ್ನು ಆರಂಬಿಸುವ ಉದ್ದೇಶವನ್ನು ಹೊಂದಿದೆ. ಪ್ರಾದೇಶಿಕ ಭಾಷೆಗಳಲ್ಲಿ ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳಿಗೆ ಪ್ರಯೋಜನಕರವಾಗುವ ವಲಯವೆಂದರೆ ಕಾನೂನು ಶಿಕ್ಷಣವಾಗಿದೆ ಎಂದು ಯುಜಿಸಿ ವಕ್ತಾರ ಜಗದೀಶ್ ಕುಮಾರ್ ತಿಳಿಸಿದ್ದಾರೆ. ''ಪಾದೇಶಿಕ ಭಾಷೆಗಳಲ್ಲಿ ಕಾನೂನು ಶಿಕ್ಷಣವನ್ನು ಅಧ್ಯಯನ ಮಾಡಿದಲ್ಲಿ ನ್ಯಾಯವಾದಿಗಳಿಗೆ ದಾಖಲೆಗಳನ್ನು ಸಿದ್ಧಪಡಿಸಲು ಸಾಧ್ಯವಾಗಲಿದೆ ಹಾಗೂ ತಮ್ಮ ಮಾತೃಭಾಷೆಗಳಲ್ಲಿ ಅವರಿಗೆ ಗ್ರಾಹಕರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ. ಸ್ಥಳೀಯ ನ್ಯಾಯಾಲಯಗಳಲ್ಲಿ ಬಹುತೇಕ ವಾದ ಪ್ರತಿವಾದಗಳು ಸ್ಥಳೀಯ ಭಾಷೆಗಳಲ್ಲಿಯೇ ನಡೆಯುತ್ತವೆ ಎಂದವರು ಹೇಳಿದರು.
ಭಾರತೀಯ ಭಾಷೆಗಳಲ್ಲಿ ಕಾನೂನು ಶಿಕ್ಷಣದ ಕೋರ್ಸ್ಗಳನ್ನು ಜಾರಿಗೊಳಿಸುವ ಬಗ್ಗೆ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಉಕುಲಪತಿಗಳ ಜೊತೆಗೂ ಯುಜಿಸಿ ಚರ್ಚಿಸಲಿದೆಯೆಂದು ಕುಮಾರ್ ತಿಳಿಸಿದರು
ಇದರ ಜೊತೆಗೆ ಭಾರತೀಯ ಭಾಷೆಗಳಲ್ಲಿ ವಿಜ್ಞಾನ ಹಾಗೂ ಮಾನವಿಕ ಶಾಸ್ತ್ರದ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಬಗ್ಗೆಯೂ ಸರಕಾರ ಪರಿಶೀಲಿಸುತ್ತಿದೆಯೆಂದು ಅವರು ಹೇಳಿದರು.





