ವಿಧಾನಸಭಾ ಚುನಾವಣೆ ಫಲಿತಾಂಶ: ಗೋವಾದಲ್ಲಿ ಬಿಜೆಪಿಗೆ ಮುನ್ನಡೆ

ಪಣಜಿ: ಕರಾವಳಿ ರಾಜ್ಯ ಗೋವಾದಲ್ಲಿ ಆಡಳಿತಾರೂಢ ಬಿಜೆಪಿ 40 ಸ್ಥಾನಗಳಲ್ಲಿ 18 ರಲ್ಲಿ ಮುನ್ನಡೆಯಲ್ಲಿದೆ. ಆದರೆ ಅದರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಬಹುದಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಆರು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ತೃಣಮೂಲ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಕಹ್ಲಿಮ್ ಕ್ಷೇತ್ರದಲ್ಲಿ 366 ಮತಗಳಿಂದ ಅಲ್ಪ ಮುನ್ನಡೆ ಸಾಧಿಸಿದ್ದಾರೆ ಎಂದು ಇತ್ತೀಚಿನ ಟ್ರೆಂಡ್‌ಗಳು ತೋರಿಸುತ್ತವೆ. ಇದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿ ಧರ್ಮೇಶ್ ಸಗ್ಲಾನಿ ಸಾವಂತ್ ಅವರಿಗಿಂತ 446 ಮತಗಳಿಂದ ಮುನ್ನಡೆ ಸಾಧಿಸಿದ್ದರು.
ಗೋವಾದಲ್ಲಿ 2017ರ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಪಡೆದಿದ್ದರೂ ಸರಕಾರ ರಚಿಸಲು ವೈಫಲ್ಯವಾಗಿರುವುದನ್ನು ತಪ್ಪಿಸಲು ಕಾಂಗ್ರೆಸ್ ತನ್ನ ಎಲ್ಲಾ ಅಭ್ಯರ್ಥಿಗಳನ್ನು ಪಣಜಿ ಬಳಿಯ ಬಾಂಬೋಲಿಮ್ ಗ್ರಾಮದ ಐಷಾರಾಮಿ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.







