ಮುಲ್ಕಿ: ರಾಜ್ಯಮಟ್ಟದ ಕೃಷಿ ಮೇಳಕ್ಕೆ ಕೊಲ್ನಾಡು ಸಜ್ಜು!
ಮಾ.11ರಿಂದ ಮೂರು ದಿನಗಳ ಕಾಲ ಕೃಷಿ ಸಿರಿ-2022

ಮುಲ್ಕಿ, ಮಾ.10: ಇಲ್ಲಿನ ಕೊಲ್ನಾಡು ಅನ್ನೋ ಪುಟ್ಟ ಊರು ರಾಜ್ಯಮಟ್ಟದ ಕೃಷಿ ಮೇಳಕ್ಕೆ ಸಜ್ಜಾಗಿದೆ. ಮಾರ್ಚ್ 11ರಿಂದ 13ರವರೆಗೆ ಕೃಷಿ ಸಿರಿ-2022 ಜರುಗಲಿದ್ದು ತುಳುನಾಡಿನ ಆಚಾರ ವಿಚಾರ, ಕಲೆ, ಜಾನಪದ ಸಂಸ್ಕೃತಿ, ಕೃಷಿ ಬದುಕಿನ ಅಳಿವು ಉಳಿವಿನ ಬಗ್ಗೆ ಕೃಷಿ ಮೇಳ ಬೆಳಕು ಚೆಲ್ಲಲಿದೆ.
10,000 ಮಂದಿ ನಿತ್ಯ ಆಗಮಿಸುವ ನಿರೀಕ್ಷೆ!
ಕೃಷಿ ಮೇಳಕ್ಕೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಂದಿ ಕೃಷಿಕರು, ಕೃಷಿ ಪ್ರೇಮಿಗಳು ಆಗಮಿಸಲಿದ್ದಾರೆ. ಸಂಘಟಕರ ಪ್ರಕಾರ ದಿನಕ್ಕೆ 10,000 ಮಂದಿ ಆಗಮಿಸುವ ನಿರೀಕ್ಷೆಯಿದ್ದು ಇದಕ್ಕಾಗಿ ವಿಶಾಲವಾದ ವೇದಿಕೆ, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಶುಕ್ರವಾರ ಬೆಳಗ್ಗೆ 10ರಿಂದ 11 ಗಂಟೆಯವರೆಗೆ 'ಯುವ ಜನರಿಗಾಗಿ ಆಧುನಿಕ ಕೃಷಿ' ವಿಚಾರಗೋಷ್ಠಿ ನಡೆಯಲಿದ್ದು, ಬಂಟ್ವಾಳ ಶಾಸಕ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಪೂ.11:30-12:30ರವರೆಗೆ 'ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸೌಲಭ್ಯ' ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ತೋಟಗಾರಿಕಾ ಇಲಾಖೆ ಹಿರಿಯ ಸಹನಿರ್ದೇಶಕ ಪ್ರವೀಣ್ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮಾ.12ರಂದು ಬೆಳಗ್ಗೆ 10-11ರವರೆಗೆ 'ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ' ವಿಚಾರಗೋಷ್ಠಿ ನಡೆಯಲಿದ್ದು ಕೃಷಿ ವಿವಿ ಹಾಸನ ಇದರ ನಿವೃತ್ತ ಪ್ರಾಧ್ಯಾಪಕ ಎ'ಎ'ಫಝಲ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. 11:30ರಿಂದ 12:30ರವರೆಗೆ 'ಕಾಲಮಾನ ಅಧರಿತ ಕೃಷಿ' ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ಪ್ರಗತಿಪರ ಕೃಷಿಕ ಶಿವಪ್ರಸಾದ್ ಓರ್ಮುಡಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 3ರಿಂದ 4ರವರೆಗೆ 'ವಿಷಮುಕ್ತ ಆಹಾರ'ದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು ಆಡ್ಡೂರು ಕೃಷ್ಣ ರಾವ್ ಪಾಲ್ಗೊಳ್ಳಲಿದ್ದಾರೆ.
ದಿನಾಂಕ 13ರಂದು ಬೆಳಗ್ಗೆ 10ರಿಂದ 11ರವರೆಗೆ 'ಜಲಸಂರಕ್ಷಣೆ' ವಿಷಯದಲ್ಲಿ ವಿಚಾರಗೋಷ್ಠಿ ಜರುಗಲಿದ್ದು, ಡಾ.ಜಗದೀಶ್ ಬಾಳ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಪೂ.11:30ರಿಂದ 'ಮನೆಯಲ್ಲಿಯೇ ಕೈತೋಟ ಮತ್ತು ಸಾವಯವ ಗೊಬ್ಬರ ತಯಾರಿ' ವಿಚಾರಗೋಷ್ಠಿ ಜರುಗಲಿದ್ದು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 3ರಿಂದ 4ರವರೆಗೆ 'ಕೃಷಿ ಮತ್ತು ಅರೋಗ್ಯ' ವಿಚಾರಗೋಷ್ಠಿ ನಡೆಯಲಿದ್ದು ವೈದ್ಯ ಅಣ್ಣಯ್ಯ ಕುಲಾಲ್ ಉಳ್ತೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಕೃಷಿ ಮೇಳದಲ್ಲಿ ಕೃಷಿ ಕುರಿತ ಮಾಹಿತಿ, ಗೋಷ್ಠಿ, ಸಂವಾದದ ಜೊತೆಗೆ ಮೇಳಕ್ಕೆ ಬರುವವರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳು, ಮಹಿಳೆಯರಿಗೆ ಮನೋರಂಜನೆ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ಮಳಿಗೆಗಳನ್ನು ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು ಜಾನುವಾರು ಜಾತ್ರೆ, ಕುಕ್ಕುಟ ಮೇಳ, ಚಿಣ್ಣರಿಗೆ ಮನೋರಂಜನೆಗಾಗಿ ಜಾಯಿಂಟ್ ವೀಲ್ ಮತ್ತಿತರ ಆಟದ ವ್ಯವಸ್ಥೆ, ಶುಚಿ ರುಚಿಯಾದ ಸಾಂಪ್ರದಾಯಿಕ ಆಹಾರ ಖಾದ್ಯಗಳ ಫುಡ್ ಕೌಂಟರ್, ಫಲಪುಷ್ಪ ಪ್ರದರ್ಶನ, ಔಷಧಿ ಗಿಡಗಳ ವನಸಿರಿ, ಸಾಂಪ್ರದಾಯಿಕ ಸೆಲ್ಫಿ ಕಾರ್ನರ್ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ತಂಡದಿಂದ 'ಗೀತಾ ಸಾಹಿತ್ಯ ಸಂಭ್ರಮ', ಸಂಜೆ 4:30ರಿಂದ ರಿಂದ ಸುರತ್ಕಲ್ ತಂಡದಿಂದ 'ರೈತರ ಅಳಿವು ಉಳಿವು', ಸಂಜೆ 7:30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ 'ನೃತ್ಯ ವೈಭವ', ರಾತ್ರಿ 9:30ರಿಂದ ಕುಳಾಯಿಯ ಕಲಾಕುಂಭ ಸಾಂಸ್ಕೃತಿಕ ವೇದಿಕೆ ವತಿಯಿಂದ 'ತುಳುನಾಡ ಸಂಸ್ಕೃತಿ' ಕಾರ್ಯಕ್ರಮ ಜರುಗಲಿದೆ.
ಮಾ.12ರಂದು ಬೆಳಗ್ಗೆ 9ರಿಂದ 10:30ರವರೆಗೆ ಹುಭಾಶಿಕ ಕೊರಗರ ಯುವ ವೇದಿಕೆ ಬಾರ್ಕೂರು ಇವರಿಂದ ಕೊರಗರ ಡೋಲು ಕುಣಿತ ಹಾಗೂ ಜಾನಪದ ಕಲಾ ವೈವಿಧ್ಯ, ಮಧ್ಯಾಹ್ನ 1 ಗಂಟೆಯಿಂದ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ 'ಪುಣ್ಯಭೂಮಿ ಭಾರತ', ಸಂಜೆ 7:30ರಿಂದ ಕಲಾಶ್ರೀ ಕುಡ್ಲ ತಂಡದಿಂದ 'ಕುಸಲ್ದ ಕುರ್ಲರಿ', ರಾತ್ರಿ 8:30ರಿಂದ ಲಕುಮಿ ತಂಡದ 'ಲೇಲೆ ಪಾಡಡೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ರವಿವಾರ ಬೆಳಗ್ಗೆ 9ರಿಂದ ತುಳು ವರ್ಲ್ಡ್ ಕಾಸರಗೋಡು ಇದರ ಸದಸ್ಯರಿಂದ 'ಪಾಡ್ದನ ಮೇಳ', ಯಕ್ಷಾಭಿನಯ ಬಳಗ ಇವರಿಂದ ಬಡಗುತಿಟ್ಟು ಯಕ್ಷನೃತ್ಯ ಮತ್ತು ರಕ್ಷಿತ್ ಪಡ್ರೆ ಸಾರಥ್ಯದಲ್ಲಿ 'ಕೃಷ್ಣಂ ವಂದೇ ಜಗದ್ಗುರುಂ' ಯಕ್ಷ ನೃತ್ಯ ಹಾಗೂ ರಾತ್ರಿ 7:30ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವರಿಂದ 'ಆಳ್ವಾಸ್ ಸಾಂಸ್ಕೃತಿಕ ವೈಭವ' ಜರುಗಲಿದೆ.
ಆಕರ್ಷಿಸುತ್ತಿರುವ 'ಪಾರಂಪರಿಕ ಗ್ರಾಮ, ಮನೋರಂಜನೆ ಕಾರ್ಯಕ್ರಮ'!
ಕೃಷಿ ಮೇಳದಲ್ಲಿ ತುಳುನಾಡಿನ ಕೃಷಿ ಹಿನ್ನೆಲೆಯ ಜನರ ಬದುಕನ್ನು ಸಾದರಪಡಿಸುವ ಪಾರಂಪರಿಕ ಗ್ರಾಮ ಜನರನ್ನು ಆಕರ್ಷಿಸುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ಪಾರಂಪರಿಕ ಗ್ರಾಮದಲ್ಲಿ ಕೃಷಿಕರ ಮನೆಗಳು, ಪರಿಸರವನ್ನು ಕಲಾವಿದರ ಕೈಚಳಕದಲ್ಲಿ ಪಡಿಮೂಡಿಸಲಾಗಿದೆ.
ವಿನಯ ಕೃಷಿ ಬೆಳೆಗಾರರ ಸಂಘ ಕೊಲ್ನಾಡು ಮೂಲ್ಕಿ ಹಾಗೂ ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಜಂಟಿಯಾಗಿ ಕೃಷಿ ಮೇಳ ಆಯೋಜನೆ ಮಾಡಿದ್ದು ಹತ್ತಾರು ಸಾಮಾಜಿಕ ಸಂಘಟನೆಗಳು ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿ ದುಡಿಯುತ್ತಿವೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಕೃಷಿ ಬದುಕು ಮತ್ತು ಅದರಾಚೆಗಿನ ಕೃಷಿಕರ ಸಂಕಷ್ಟಗಳ ಬಗ್ಗೆ ಕೃಷಿ ಸಿರಿ-2022ರಲ್ಲಿ ಗಂಭೀರ ಚಿಂತನೆ ನಡೆಯುವ ಜೊತೆಯಲ್ಲಿ ತುಳುನಾಡಿನ ಅಳಿದುಳಿದ ಕೃಷಿ ಚಟುವಟಿಕೆಗಳು ಗರಿಗೆದರಿದರೆ ಸಮ್ಮೇಳನ ಸಾರ್ಥಕ್ಯ ಪಡೆಯಲಿದೆ.
ಎಲ್ಲಿಂದ ಎಷ್ಟು ದೂರ?
ರಾಜ್ಯಮಟ್ಟದ ಕೃಷಿ ಮೇಳ ನಡೆಯುವ ಕೊಲ್ನಾಡು ಮೂಲ್ಕಿ ಪಟ್ಟಣದಿಂದ 2.5 ಕಿ.ಮೀ. ದೂರದಲ್ಲಿದೆ. ಸುರತ್ಕಲ್ ನಿಂದ 13 ಕಿ. ಮೀ., ಮಂಗಳೂರಿನಿಂದ 24 ಕಿ. ಮೀ. ಹಾಗೂ ಉಡುಪಿಯಿಂದ 31 ಕಿ. ಮೀ. ದೂರದಲ್ಲಿದೆ. ಹತ್ತಿರದ ಪೇಟೆ ಮೂಲ್ಕಿ, ಹತ್ತಿರದ ರೈಲು ನಿಲ್ದಾಣ ಮೂಲ್ಕಿ ಹಾಗೂ ಎಕ್ಸ್ ಪ್ರೆಸ್ ಬಸ್ ನಿಲ್ದಾಣ ಕೊಲ್ನಾಡು ಕಾಲ್ನಡಿಗೆ ದೂರದಲ್ಲಿದೆ. ಕೊಲ್ನಾಡು ತಲುಪಲು ಮಂಗಳೂರು, ಉಡುಪಿ ಕಡೆಯಿಂದ ಸಾಕಷ್ಟು ಸಂಖ್ಯೆಯ ಖಾಸಗಿ ಸರ್ವಿಸ್ ಹಾಗೂ ಎಕ್ಸ್ ಪ್ರೆಸ್ ಬಸ್ ಸೇವೆ ಲಭ್ಯವಿದೆ.