ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಿಳಾ ಸಾಧಕರಿಗೆ ಜೀವನಪರ್ಯಂತ ಉಚಿತ ಬಸ್ ಪಾಸ್: ಸಚಿವ ಶ್ರೀರಾಮುಲು ಘೋಷಣೆ
ಬೆಂಗಳೂರು, ಮಾ.10: ಮಹಿಳೆಯರ ಸುರಕ್ಷತೆ ಮತ್ತು ಆರ್ಥಿಕತೆ ನಮ್ಮ ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದ್ದು, ಇದಕ್ಕಾಗಿ ವಿವಿಧ ಯೋಜನೆಗಳಿಗೆ 43,188 ರೂ. ಕೋಟಿಯನ್ನು ಆಯವ್ಯಯದಲ್ಲಿ ಕಾಯ್ದಿರಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಿಳಾ ಸಾಧಕರಿಗೆ, ಸಾರಿಗೆ ಇಲಾಖೆಯಿಂದ ಇನ್ನು ಮುಂದೆ ಜೀವನ ಪರ್ಯಂತ ಉಚಿತ ಪಾಸ್ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಘೋಷಿಸಿದ್ದಾರೆ.
ಕೆಎಸ್‍ಆರ್‍ಟಿಸಿ ವತಿಯಿಂದ ನಿಗಮದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ವರ್ಷದಿಂದ ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಆರಂಭಿಸಲಾಗಿದೆ. ಮಹಿಳಾ ಶಕ್ತಿ ಸಾವಿತ್ರಿ ಭಾಯಿ ಫುಲೆಯವರ ಹೆಸರಿನಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ ಆರಂಭಿಸಲಾಗುತ್ತಿದೆ. 300 ಮಹಿಳಾ ಸ್ವಾಸ್ಥ್ಯಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮಹಿಳೆಯರು ಆರಂಭಿಸುವ ಸ್ಟಾರ್ಟ್‍ಅಪ್‍ಗಳಿಗೆ 10 ಲಕ್ಷ ರೂ. ನೇರಸಾಲ ಕೊಡುವ ಯೋಜನೆ ತರಲಾಗಿದೆ. 18ವರ್ಷ ಪೂರೈಸಿದ ಮಹಿಳೆಯರಿಗೆ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡಲು 8 ಕೇಂದ್ರಗಳನ್ನ ಪ್ರಾಯೋಗಿಕವಾಗಿ ಸ್ಥಾಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ ತರಲಾಗಿದೆ ಎಂದು ಉಲ್ಲೇಖಿಸಿದರು.
ಈ ವರ್ಷದ ಮಹಿಳಾ ದಿನಾಚರಣೆಯ ತತ್ವದಂತೆ, ನಮ್ಮ ಹೆಣ್ಣು ಮಕ್ಕಳಿಗೆ ಸಮಾನತೆಯ ಉತ್ತಮ ನಾಳೆಯನ್ನು ಕಟ್ಟುವ ಕೆಲಸ ನಮ್ಮ ಸರಕಾರ ಇಂದು ಬಜೆಟ್ ಮೂಲಕ ಮಾಡಿದೆ. ಏರ್‍ಫೋರ್ಸ್‍ನಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಮಹಿಳಾ ಫೈಟರ್ ಪೈಲಟ್ ಪ್ರಯೋಗವನ್ನು ಕಳೆದ ತಿಂಗಳು ಶಾಶ್ವತ ಯೋಜನೆಯಾಗಿ ಮಾಡಲಾಗಿದೆ ಎಂದರು.
ಕೆಎಸ್ಸಾರ್ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, ಪುರುಷರಷ್ಟೇ ಸಾಮರ್ಥ್ಯ ಇರೋ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೆ ಎಲ್ಲಾ ವಲಯಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ದಿನಾಚರಣೆಯ ಆರಂಭದ ಹಿಂದೆ ಹಲವು ಹೋರಾಟಗಳು ಇವೆ. ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 17 ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ಮಹಿಳಾ ಸಿಬ್ಬಂದಿಗಳನ್ನು ಗುರುತಿಸಿ, ಅಂತರ್‍ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸನ್ಮಾನಿಸಿರುವುದು ಸಂತೋಷದ ವಿಷಯವಾಗಿದೆ. ಸಾರಿಗೆ ನಿಗಮದಲ್ಲಿ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಸೇರಿದಂತೆ 10,000ಕ್ಕೂ ಹೆಚ್ಚಿನ ಮಹಿಳಾ ಸಿಬ್ಬಂದಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಅವರನ್ನು ಗೌರವಿಸಿ ಗುರುತಿಸುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಬಗ್ಗೆ ನಾವು ಸದಾ ಗಮನಹರಿಸುತ್ತೇವೆ ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಅವರು ಮಾತನಾಡಿ, ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಆಗುವ ಲೈಂಗಿಕ ಕಿರುಕುಳ ತಡೆಯಲು ನಿಗಮದ ಎಲ್ಲಾ ಘಟಕಗಳು, ವಿಭಾಗ, ಪ್ರಾದೇಶಿಕ ಕಾರ್ಯಾಗಾರ ಮತ್ತು ಕೇಂದ್ರ ಕಚೇರಿಯಲ್ಲಿ ಮಹಿಳಾ ನೌಕರರ ಆಂತರಿಕ ಸಮಿತಿಯನ್ನು ಸ್ಥಾಪಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ನಿರುಪಯುಕ್ತ ಬಸ್ಸುಗಳನ್ನು ಶೌಚಾಲಯವನ್ನಾಗಿ ಮಾರ್ಪಡಿಸಿ, ಬೆಂಗಳೂರು ಹಾಗೂ ದಾವಣಗೆರೆಯಲ್ಲಿ “ಸ್ತ್ರೀ ಶೌಚಾಲಯ” ಒದಗಿಸಲಾಗಿದ್ದು, ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಇದೇ ವೇಳೆ ಪದ್ಮಶ್ರೀ ಪುರಸ್ಕೃತೆ ಸೀತವ್ವ ಜೋಡಟ್ಟಿ ಅವರಿಗೆ ವೋಲ್ವೋ ಸೇರಿದಂತೆ ಯಾವುದೇ ನಿಗಮದ ವಾಹನಗಳಲ್ಲಿ ಜೀವಿತಾವಧಿಯವರೆಗೆ ಸಂಚರಿಸಲು ಉಚಿತ ಬಸ್ ಪಾಸ್‍ನ್ನು ವಿತರಿಸಿ, ಇದೇ ಸಂದರ್ಭದಲ್ಲಿ ಓರ್ವ ಮಹಿಳಾ ನಿರ್ವಾಹಕಿ, ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ರಕ್ಷಕಿ ಒಟ್ಟು 17 ವಿಭಾಗಗಳಿಂದ 41 ಮಹಿಳಾ ಸಿಬ್ಬಂದಿಗಳನ್ನು ಇಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿಯ ಸಿಬ್ಬಂದಿ ಮತ್ತು ಜಾಗೃತಾ ವಿಭಾಗದ ಟಿ.ವೆಂಕಟೇಶ್ ಕರಾರಸಾ ನಿಗಮದ ನಿರ್ದೇಶಕ ಪಿ. ರುದ್ರೇಶ, ಚಲನಚಿತ್ರ ನಟಿ ಕು. ದೀಪಿಕಾ ದಾಸ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.