ಮಂಡ್ಯ: ಅಧಿಕಾರಿಗಳಿಂದ ಕಳಪೆ ರಸಗೊಬ್ಬರ ಘಟಕದ ಮೇಲೆ ದಾಳಿ; ಲಾರಿ ಸಮೇತ 25 ಟನ್ ಕಳಪೆ ಗೊಬ್ಬರ ವಶ

ಮಂಡ್ಯ, ಮಾ.10: ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ-ಕುಂಟನಹಳ್ಳಿ ಗ್ರಾಮದ ಸಮೀಪ ಕಳಪೆ ಸಾವಯವ ರಸಗೊಬ್ಬರ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಕಳಪೆ ಗೊಬ್ಬರ ವಶಪಡಿಸಿಕೊಂಡಿದ್ದಾರೆ.
ಗ್ರಾಮದ ಸಮೀಪ ನೀಲಗಿರಿ ತೋಪಿನಲ್ಲಿ ಕೃಷಿ ಇಲಾಖೆಯಿಂದ ಪರವಾನಗಿ ಪಡೆಯದೆ ಸಮೀಪದ ಎನ್‍ಎಸ್‍ಎಲ್ ಷುಗರ್ಸ್ ಕಾರ್ಖಾನೆಯ ಮಡ್ಡಿಯನ್ನು ತಂದು ಅದಕ್ಕೆ ಸ್ಟೆಂಟ್ ವಾಸ್ ಮಿಶ್ರಣ ಮಾಡಿ 40 ಕೆಜಿ ತೂಕದ ಬ್ಯಾಗ್ ತಯಾರಿಸಿ, ಪ್ರತಿ ಚೀಲಕ್ಕೆ 599 ರೂ. ದರ ನಿಗದಿ ಮಾಡಿ ಆ ಗೊಬ್ಬರಕ್ಕೆ ನಿಸರ್ಗ ಆಗ್ರ್ಯಾನಿಕ್, ಭೂಮಿ ಸಮೃದ್ಧಿ ಬಯೋಗೋಲ್ಡ್, ಭೂಮಿ ಸಮೃದ್ಧಿ ಕಾರ್ಬನ್ ಎನ್ರಿಚ್ ಎಂಬ ಮೂರು ಹೆಸರನ್ನಿಟ್ಟು ಬೆಂಗಳೂರು, ಮಂಗಳೂರು ಹಾಗೂ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಉಪ ನಿರ್ದೇಶಕಿ ಮಾಲತಿ, ಸಹಾಯಕ ನಿರ್ದೇಶಕ ಶ್ರೀನಾಥ್ ಮತ್ತು ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ಕಳಪೆ ಸಾವಯವ ಗೊಬ್ಬರ ಘಟಕದ ಮೇಲೆ ದಾಳಿ ಮಾಡಿ ಕೆಎ-11:7390 ವಾಹನದಲ್ಲಿ ಶೇಖರಿಸಿದ್ದ ಸುಮಾರು 500 ಚೀಲಗಳಲ್ಲಿ ಅಂದಾಜು 25 ಟನ್ ಕಳಪೆ ಸಾವಯವ ಗೊಬ್ಬರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾರಿ ಚಾಲಕನನ್ನು ಬೆಸಗರಹಳ್ಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.







