ಬೆಂಗಳೂರು: ನೂರನೇ ದಿನಕ್ಕೆ ಕಾಲಿಟ್ಟ ಐಟಿಐ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಮಾ.10: ನಗರದ ಕೆ.ಆರ್.ಪುರಂನ ಬಳಿ ಇರುವ ಐಟಿಐ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 80 ಜನ ಕಾರ್ಮಿಕರನ್ನು ಆಡಳಿತ ಮಂಡಳಿಯು ಕಾನೂನುಬಾಹಿರವಾಗಿ ಕೆಲಸದಿಂದ ತೆಗೆದಿದೆ. ಕಳೆದ 3 ವರ್ಷಗಳಿಂದ 30 ವರ್ಷದವರೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಹಕ್ಕುಗಳನ್ನು ಕೇಳಿದ ಪರಿಣಾಮವಾಗಿ ಕೇಂದ್ರ ಸರಕಾರ ಒಡೆತನದ ಐಟಿಐ ಆಡಳಿತ ಮಂಡಳಿಯು ಡಿ.1ರಂದು ಕಾರ್ಮಿಕರನ್ನು ಕೆಲಸದಿಂದ ತೆಗೆಯಿತು. ಇದನ್ನು ಖಂಡಿಸಿ ಕಳೆದ ನೂರು ದಿನಗಳಿಂದ ಕಾರ್ಖಾನೆಯ ಮುಂಭಾಗ ತಾತ್ಕಾಲಿಕ ಬಿಡಾರವನ್ನು ನಿರ್ಮಿಸಿಕೊಂಡು ಹಗಲು-ರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ.
ಐಟಿಐ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಒಂದೇ ಗುತ್ತಿಗೆ ಕಂಪನಿಯ ಅಧೀನದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ಕಾಯಂಗೊಳಿಸಬೇಕು ಎಂಬ ನೆಪವೊಡ್ಡಿ, ಮತ್ತೊಂದು ಕಂಪನಿಗೆ ಕಾರ್ಮಿಕರನ್ನು ವರ್ಗಾಯಿಸುವ ತಂತ್ರಗಾರಿಕೆಯನ್ನು ಐಟಿಐ ಆಡಳಿತ ಮಂಡಳಿ ಕಂಡುಕೊಂಡಿದೆ. ಹೀಗೆ ಗುತ್ತಿಗೆ ಕಂಪನಿಯನ್ನು ಬದಲಿಸುವುದರಿಂದ ಕಾರ್ಮಿಕರ ಅನುಭವ ಶೂನ್ಯವಾಗುತ್ತದೆ. ಅಲ್ಲದೆ, ಕಾರ್ಮಿಕರನ್ನು ಕಾಯಂಗೊಳಿಸಲು ಸಾಧ್ಯವಾಗುವುದಿಲ್ಲ. ಕಾಲಕಾಲಕ್ಕೆ ಸಂಬಳವನ್ನು ಏರಿಸಲು ಅವಕಾಶ ಇರುವುದಿಲ್ಲ. ಹಾಗಾಗಿ ಇದೊಂದು ಆಧುನಿಕ ಜೀತಪದ್ಧತಿಯಾಗಿದ್ದು, ಇದನ್ನು ವಿರೋಧಿಸಿದ ಕಾರಣ ಕಾರ್ಮಿಕರಿಗೆ ಕೆಲಸವನ್ನು ನಿರಾಕರಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಐಟಿಐ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿ, ವಜಾಗೊಂಡ ಕಾರ್ಮಿಕ ಹೇಮಂತ್ ಮಾತನಾಡಿ, ಕೆಲಸವನ್ನು ನಿರಾಕರಿಸುವ ಮೊದಲು ಕೋವಿಡ್ ಸಂದರ್ಭದಲ್ಲಿ ದುಡಿದ ಸಂಬಳವನ್ನು ಐಟಿಐ ಆಡಳಿತ ಮಂಡಳಿ ನೀಡದಿದ್ದಾಗ, ಪ್ರಾದೇಶಿಕ ಕಾರ್ಮಿಕ ಆಯುಕ್ತರ ಬಳಿ ದೂರು ಸಲ್ಲಿಸಿ, ಸಂಬಳವನ್ನು ಪಡೆದಿದ್ದೆವು. ಬಳಿಕ ಕಾನೂನಿನ ಪ್ರಕಾರ ಸಿಗಬೇಕಾದ ಕೆಲವೊಂದು ಸವಲತ್ತುಗಳನ್ನು ಪಡೆಯಲು ಕಾರ್ಮಿಕರೆಲ್ಲಾ ಒಗ್ಗೂಡಿ ಸಂಘವನ್ನು ಸ್ಥಾಪಿಸಿಕೊಂಡಿದ್ದೆವು. ಹಲವಾರು ಕಾರ್ಮಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಐಟಿಐ ಆಡಳಿತ ಮಂಡಳಿಗೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ಆದರೆ, ಆಡಳಿತ ಮಂಡಳಿಯು ಅದನ್ನು ತಿರಸ್ಕರಿಸಿದ ಕಾರಣ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಬಳಿ ದೂರು ಸಲ್ಲಿಸಿದ್ದೇವೆ. ಆಯುಕ್ತರು ದೂರನ್ನು ಸ್ವೀಕರಿಸಿ, ವಿಚಾರಣೆಗೆ ಕಾಯ್ದಿರಿಸಿದ್ದಾರೆ. ವಿಚಾರಣೆ ನಡೆಯುವವರೆಗೆ ಕಾರ್ಮಿಕರನ್ನು ತೆಗೆಯದಂತೆ ತಿಳಿಸಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ, ಆಡಳಿತ ಮಂಡಳಿಯು 80 ಕಾರ್ಮಿಕರನ್ನು ಬೀದಿಪಾಲು ಮಾಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕಾರ್ಮಿಕರನ್ನು ವಜಾಗೊಳಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಹಾಗಾಗಿ ಮರಳಿ ಕೆಲಸಕ್ಕೆ ಸೇರಿಸಿ, ಕಾನೂನಿನ ಸವಲತ್ತುಗಳನ್ನು ನೀಡಿ, ಗೌರವದಿಂದ ನಡೆಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದರು.







