ಸತತ ಎರಡನೇ ದಿನವೂ ಉಡುಪಿ ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪಾಸಿಟಿವ್

ಉಡುಪಿ, ಮಾ.10: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಯಾರಲ್ಲೂ ಕೋವಿಡ್-19 ಸೋಂಕು ಪತ್ತೆಯಾಗಿಲ್ಲ. ಇದರಿಂದ ಜಿಲ್ಲೆ ಕೋವಿಡ್ ಮುಕ್ತವಾಗುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಕಳೆದ ಫೆ.26ರಿಂದ ಒಂದಂಕಿಗೆ ಇಳಿದ ಪಾಸಿಟಿವ್ ಸಂಖ್ಯೆ ಸತತವಾಗಿ ಇದೇ ರೀತಿ ಮುಂದುವರಿದಿದ್ದು, ನಿನ್ನೆಯಿಂದ ಪಾಸಿಟಿವ್ ಶೂನ್ಯಕ್ಕಿಳಿದಿದೆ.
ಗುರುವಾರ ಜಿಲ್ಲೆಯ 1357 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇವರು ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಉಡುಪಿ ತಾಲೂಕಿನಲ್ಲಿ 1145 ಮಂದಿ, ಕುಂದಾಪುರ ತಾಲೂಕಿನಲ್ಲಿ 90 ಹಾಗೂ ಕಾರ್ಕಳ ತಾಲೂಕಿನಲ್ಲಿ 122 ಮಂದಿಗೆ ಕೋವಿಡ್ ಸೋಂಕಿನ ಪರೀಕ್ಷೆ ನಡೆಸಲಾಗಿದೆ.
ದಿನದಲ್ಲಿ ಮತ್ತೆ ನಾಲ್ವರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ32ಕ್ಕಿಳಿದಿದೆ. ಕೊರೋನದಿಂದ ಜ.1ರ ನಂತರ ಪಾಸಿಟಿವ್ ಬಂದವರ ಸಂಖ್ಯೆ 18,421 ಆದರೆ, ಚೇತರಿಸಿಕೊಂಡವರ ಸಂಖ್ಯೆ 18479 ಕ್ಕೇರಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ. ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲೂ ಯಾರೂ ಸಹ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿಲ್ಲ.
1666 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 1666 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲಿನ 230 ಹಿರಿಯ ನಾಗರಿಕರು ಸೇರಿದಂತೆ ಒಟ್ಟು 246 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 42 ಮಂದಿ ಮೊದಲ ಡೋಸ್ ಹಾಗೂ 1378 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.