ಈಗಲ್ಟನ್ ರೆಸಾರ್ಟ್ ಭೂಮಿ ಒತ್ತುವರಿ ವಿಚಾರ: ಸದನದಲ್ಲಿ ಕುಮಾರಸ್ವಾಮಿ-ಸಿದ್ದರಾಮಯ್ಯ ವಾಕ್ಸಮರ

ಬೆಂಗಳೂರು, ಮಾ. 10: ‘ರಾಮನಗರ ಜಿಲ್ಲೆ ಬಿಡದಿ ಬಳಿಯ ಈಗಲ್‍ಟನ್ ರೆಸಾರ್ಟ್‍ಗೆ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣದಲ್ಲಿ ಆ ಜಮೀನಿಗೆ ದರ ನಿಗದಿ ವಿಚಾರ' ವಿಧಾನಸಭೆಯಲ್ಲಿ ಪ್ರತಿಧ್ವನಿಸಿತಲ್ಲದೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಏರಿದ ಧ್ವನಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಯಿತು.
ಗುರುವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, *‘ರೆಸಾರ್ಟ್ ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ಕೋರ್ಟ್ ಆದೇಶದಂತೆ ದರ ನಿಗದಿ ಮಾಡುವಲ್ಲಿ ಅಕ್ರಮ ನಡೆದಿದ್ದು, 982 ಕೋಟಿ ರೂ.ನಿಗದಿಪಡಿಸಲಾಗಿದೆ. ಆದರೆ, ಆ ಸಂಸ್ಥೆ ಗಾಲ್ಫ್ ಕೋರ್ಟ್ ನಿರ್ಮಿಸಿದ್ದು, ಅಂತರ್ ರಾಷ್ಟ್ರೀಯ ಮಟ್ಟದ ಆಟಗಾರರಿಗೆ ಉಚಿತವಾಗಿ ತರಬೇತಿ ನೀಡುವ ಕೆಲಸ ಮಾಡುತ್ತಿದೆ. ದಕ್ಷ ಮತ್ತು ಪಾರದರ್ಶಕ ಆಡಳಿತ ನಡೆಸಿದ್ದೇವೆಂದು ಹೇಳುತ್ತಿರುವವರಿಗೆ ‘ಭಾರತ ರತ್ನ' ಪ್ರಶಸ್ತಿ ನೀಡಬೇಕು' ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರತ್ತ ಬೆರಳು ತೋರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ‘ಒತ್ತುವರಿ ಮಾಡಿಕೊಂಡ ಸರಕಾರಿ ಭೂಮಿಯಲ್ಲಿ ವಿಲ್ಲಾಗಳನ್ನು ನಿರ್ಮಿಸಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದು, ಸರಕಾರ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಿದೆ. ಇದರಲ್ಲಿ ಅಕ್ರಮವಾಗಿದ್ದರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಯಾರಾದರೂ ಕಮಿಷನ್ ಪಡೆದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ' ಎಂದು ಆಗ್ರಹಿಸಿದರು.
‘ಬಹಳ ವರ್ಷಗಳಿಂದ ರಾಮನಗರ ಕ್ಷೇತ್ರ, ಜಿಲ್ಲೆಯನ್ನು ನೀವೇ(ಕುಮಾರಸ್ವಾಮಿ) ಪ್ರತಿನಿಧಿಸುತ್ತಿದ್ದು, ನೀವು ಮುಖ್ಯಮಂತ್ರಿಯೂ ಆಗಿ ಕೆಲಸ ಮಾಡಿದ್ದೀರಿ. ಆ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ಇದೀಗ ಬಜೆಟ್ ಮೇಲೆ ಚರ್ಚೆ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅನಗತ್ಯವಾಗಿ ಈ ವಿಷಯ ಪ್ರಸ್ತಾಪಿಸುತ್ತಿರುವ ಉದ್ದೇಶವಾದರೂ ಏನು? ನೀವು ಇದೀಗ ಈಗಲ್‍ಟನ್ ರೆಸಾರ್ಟ್ ಪರವಾಗಿ ವಕಾಲತ್ತು ವಹಿಸುತ್ತಿರುವುದು ಏಕೆ? ಎಂದು ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ವಾಗ್ದಾಳಿ ನಡೆಸಿದರು.
ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ‘ರಾಜಕೀಯ ಕಾರಣಕ್ಕಾಗಿ ನೀವು ಈ ರೀತಿ ಮಾತನಾಡುತ್ತಿದ್ದೀರಿ. ಈ ಬಗ್ಗೆ ತನಿಖೆಯಾಗಲಿ, ಯಾರು ತಪ್ಪಿತಸ್ಥರಿದ್ದರೆ ಕ್ರಮ ಆಗಲಿ, ಯಾರು ಯಾರ ಪರವಾಗಿದ್ದಾರೆಂಬುದು ಸೇರಿದಂತೆ ಎಲ್ಲವೂ ಹೊರಬರಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ಕೂಡಲೇ ಈ ಬಗ್ಗೆ ತನಿಖೆಗೆ ಆದೇಶಿಸಬೇಕು' ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
‘ನಮ್ಮ ಸರಕಾರದ ಅವಧಿಯಲ್ಲೇ ಈಗಲ್‍ಟನ್ ರೆಸಾರ್ಟ್‍ನ ಒತ್ತುವರಿ ಭೂಮಿಗೆ 982 ಕೋಟಿ ರೂ. ನಿಗದಿ ಮಾಡಿದ್ದು, ಎಲ್ಲವೂ ನ್ಯಾಯಾಲಯದ ಆದೇಶಗಳಂತೆ ನಡೆದಿದೆ. ಒಳಒಪ್ಪಂದದ ರಾಜಕೀಯ ಮಾಡುತ್ತಿದ್ದೀರಿ. ಹೀಗಾಗಿ ನಿಮ್ಮ ಬಗ್ಗೆ ಜನತೆ ಏನೆಲ್ಲಾ ಮಾತನಾಡುತ್ತಿದ್ದಾರೆಂದು ನಮಗೆ ಗೊತ್ತಿದೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದರಿಂದ ಆಕ್ರೋಶಿತರಾದ ಕುಮಾರಸ್ವಾಮಿ, ‘ನಾನು ಕಮಿಷನ್ ಪಡೆಯುವುದೇ. ದಾಖಲೆ ಇಲ್ಲದೆ ನಾನು ಏನು ಮಾತನಾಡುವುದಿಲ್ಲ. ತನಿಖೆ ಮಾಡಲಿ. ಯಾರು ರೆಸಾರ್ಟ್ ಪರವಾಗಿದ್ದಾರೆಂಬುದು ಸೇರಿದಂತೆ ಎಲ್ಲವೂ ಬೆಳಕಿಗೆ ಬರಲಿ. ಯಾರು ಏನೇನು ಮಾಡಿದ್ದಾರೆಂಬುದು ಗೊತ್ತಾಗುತ್ತದೆ. ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕು' ಎಂದು ಕೋರಿದರು.
ಕಾನೂನು ತಜ್ಞರ ಜತೆ ಚರ್ಚಿಸಿ ಕ್ರಮ: ಈಗಲ್‍ಟನ್ ರೆಸಾರ್ಟ್ ಸರಕಾರಿ ಭೂಮಿ ಕಬಳಿಕೆ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದ್ದು, ಈ ಸಂಬಂಧ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು. ಈ ಬಗ್ಗೆ ಎಲ್ಲವನ್ನೂ ಅಧ್ಯಯನ ಮಾಡಬೇಕಾಗಿದೆ. ಕೋರ್ಟ್ ಆದೇಶಗಳೇನು ಎಲ್ಲವನ್ನೂ ನೋಡಬೇಕು. ಅಕ್ರಮಗಳು ಏನೇ ಇದ್ದರೂ ನ್ಯಾಯಾಲಯದ ಆದೇಶಗಳಿಗೆ ಧಕ್ಕೆಯಾಗದಂತೆ ಮುಂದಿನ ಕ್ರಮಗಳನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
‘ರೆಸಾರ್ಟ್ ಅವ್ಯವಹಾರಗಳ ಬಗ್ಗೆ ಕುಮಾರಸ್ವಾಮಿ ಅವರಿಂದಲೂ ಸಂಪೂರ್ಣ ದಾಖಲೆಗಳನ್ನು ಪಡೆಯುತ್ತೇನೆ. ಸರಕಾರದಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಕೋರ್ಟ್ ಆದೇಶಗಳನ್ನು ನೋಡುತ್ತೇನೆ. ಹಾಗೆಯೇ ಸಚಿವ ಸಂಪುಟದಲ್ಲಿ ಆಗಿರುವ ತೀರ್ಮಾನ ಎಲ್ಲವನ್ನು ನೋಡಿ, ಎಚ್ಚರಿಕೆಯಿಂದ ತೀರ್ಮಾನ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದರು.
‘ಗೂಳಿಗಳು ಕಾಳಗಕ್ಕೆ ಬಿದ್ದಾಗ ಸಣ್ಣಪುಟ್ಟ ಕರುಗಳು ಸಾಯುತ್ತವೆ. 2018ರ ಫಲಿತಾಂಶ ಬಂದಾಗ ಜೋಡೆತ್ತುಗಳು ಒಟ್ಟಿಗೆ ಇದ್ದವು, ನಾವು ಶೌಚಕ್ಕೆ ಹೋಗಲು ಬಿಸ್ಲೇರಿ ಬಾಟ್ಲಿ ತೆಗೆದುಕೊಂಡ ಹೋಗಬೇಕಾಯಿತು. ಅರ್ಧರಾತ್ರಿಯಲ್ಲಿ ವಿಶೇಷ ವಿಮಾನ ಬರುತ್ತದೆ ಎಂದರು, ಆದರೆ ಅಲ್ಲಿಗೆ ಅದ್ಯಾವುದೋ ಹಳೆಯ ಬಸ್ ಅಷ್ಟೇ ಬಂದಿದ್ದು, ನಮಗೇನು ನಾವು ಅಲ್ಲೇ ಇದ್ದೆವು. ಬಟ್ಟೆಬರೆ ಇಲ್ಲದೆ ಆ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದೆವು. ನಮ್ಮದು ಅಪರಾಧ ಆಗಿದೆ. ನಮಗೂ ದಂಡ ಹಾಕಿದರೆ ನೋಡಿಕೊಂಡು ಹಾಕಿ. ಆದರೆ, ನಾವು ನೀವು ಒಟ್ಟಿಗೆ ಇದ್ದುದರಿಂದ ‘ಭಾರತ ರತ್ನ' ಪ್ರಶಸ್ತಿ ದೊಡ್ಡವರು ನೀವು, ಮೊದಲು ನಿಮಗೆ ಬರಲಿ, ನಂತರ ನಾವು-ನೀವು ಅದನ್ನು ಹಂಚಿಕೆ ಮಾಡಿಕೊಳ್ಳೋಣ'
-ಕೆ.ಆರ್.ರಮೇಶ್ ಕುಮಾರ್ ಮಾಜಿ ಸ್ಪೀಕರ್
‘ರಾಮನಗರದ ಆ ಪ್ರಭಾವಿ ನಾಯಕ ಯಾರು? ಜೋಡೆತ್ತೆ ಅಥವಾ ಒಂದೇ ಎತ್ತೇ, ಆ ಮಹಾನಾಯಕ ಯಾರು? ಈಗಲ್ಟನ್ ರೆಸಾರ್ಟ್‍ನ ಭೂಮಿ ವಿಚಾರ ಸಂಬಂಧ ಸುದೀರ್ಘವಾಗಿ ಮಾತನಾಡಿದ್ದೀರಿ. ಇದರ ಹಿಂದೆ ಇರುವ ಆ ಪ್ರಭಾವಿ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿ. ಮುಂದಿನ ದಿನಗಳಲ್ಲಿ ಆ ವ್ಯಕ್ತಿಯೇ ರಾಜ್ಯದ ಮುಖ್ಯಮಂತ್ರಿ ಆದರೆ ಹೇಗೇ? ಎಂಬ ಭಯ ಕಾಡುತ್ತಿದೆ. ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಲು ಮುಂದಾಗಿರುವ ಆ ವ್ಯಕ್ತಿ ಯಾರು ಎಂದೂ ಹೇಳಿ?'
-ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸದಸ್ಯ
‘ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುವ ನೀವೇ ಇದರಲ್ಲಿ ಅಕ್ರಮ ನಡೆದಿದ್ದರೆ ಏನೂ ಮಾಡಲು ಸಾಧ್ಯವಾಗದೇ ಸುಮ್ಮನಿದ್ದು, ಇದೀಗ ರಾಜಕೀಯ ಕಾರಣಕ್ಕಾಗಿ ಮಾತನಾಡುವುದು ಸಲ್ಲ. ಆಯವ್ಯಯದ ಮೇಲೆ ಮಾತನಾಡದೆ ಸುಮ್ಮನೆ ಹಳೆಯ ವಿಚಾರಗಳನ್ನಿಟ್ಟುಕೊಂಡು ಚರ್ಚೆ ಅಗತ್ಯವಿಲ್ಲ. ತಪ್ಪಾಗಿದ್ದರೆ ಸರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಬಜೆಟ್‍ಗೂ ಇದಕ್ಕೂ ಏನು ಸಂಬಂಧ. ಹೀಗೆ ಮಾತನಾಡುತ್ತಾ ಹೋದರೆ ನಾನು ಇನ್ನೂ ಹತ್ತು ದಿನ ಮಾತನಾಡಬಲ್ಲೇ. ನಿಮಗಿಂತ ನಾನು ಒಳ್ಳೆಯ ಮಾತುಗಾರ. ಇಂತಹ ಒಳ ಒಪ್ಪಂದ, ಒಳರಾಜಕೀಯಕ್ಕೆ ನಾವು ಹೆದರಿಕೊಳ್ಳುವುದಿಲ್ಲ'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
‘ಈಗಲ್‍ಟನ್ ರೆಸಾರ್ಟ್ ವಿಚಾರದಲ್ಲಿ ನಾನು ಕಮಿಷನ್ ಪಡೆಯುವ ಮಾತೇ ಇಲ್ಲ. ನನ್ನದೇನಿದ್ದರೂ ಮಾನವೀಯತೆ ದೃಷ್ಟಿಯಿಂದ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಲಾಗಿದೆ. ನಾನು ಸಿಎಂ ಆಗಿದ್ದ ವೇಳೆ ಈ ವಿಷಯ ನನ್ನ ಮುಂದೆ ಬಂದಿಲ್ಲ. ನಾನು ಹೇಗೆ ಕೆಲಸ ಮಾಡಬೇಕೆಂದು ನಿಮ್ಮಿಂದ ಕಲಿಯಬೇಕಿಲ್ಲ. ನಾನು ಪ್ರಸ್ತಾಪಿಸಿದ ವಿಚಾರವನ್ನು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸರಕಾರ ಈ ಬಗ್ಗೆ ಕೂಡಲೇ ನ್ಯಾಯಾಧೀಶರಿಂದ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು'
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
.jpg)







