ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಸಂತ್ರಸ್ತೆ ಯುವತಿಯ ಅರ್ಜಿಗಳನ್ನು ರೋಸ್ಟರ್ ಪೀಠಕ್ಕೆ ಹಿಂದಿರುಗಿಸಿದ ಹೈಕೋರ್ಟ್

ಬೆಂಗಳೂರು, ಮಾ.10: ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಸಲ್ಲಿಸಿರುವ ಎರಡು ಅರ್ಜಿಗಳನ್ನು ರೋಸ್ಟರ್ ಪೀಠವು ಆಲಿಸಿ ಇತ್ಯರ್ಥಪಡಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಸಂತ್ರಸ್ತ ಯುವತಿಯು ಸೀಡಿ ಪ್ರಕರಣದ ತನಿಖೆಗೆ ಎಸ್‍ಐಟಿಯ ರಚಿಸಿರುವುದರ ಸಂವಿಧಾನದ ಸಿಂಧುತ್ವ ಹಾಗೂ ಜಾರಕಿಹೊಳಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಎರಡು ಅರ್ಜಿಗಳನ್ನು ರೋಸ್ಟರ್ ಪೀಠವು ಆಲಿಸಿ ಇತ್ಯರ್ಥಪಡಿಸಬೇಕೆಂದು ಆದೇಶಿಸಿದೆ.
ಜಾರಕಿಹೊಳಿ ವಿರುದ್ಧದ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎಸ್‍ಐಟಿ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಮುಂದಾಗಿತ್ತು. ಆದರೆ, ಸುಪ್ರೀಂಕೋರ್ಟ್ ಈ ತನಿಖಾ ವರದಿ ಸಲ್ಲಿಕೆಗೆ ಇತ್ತೀಚೆಗೆ ತಡೆ ನೀಡಿತ್ತು.
ಎಸ್‍ಐಟಿಯ ರಚನೆ ಪ್ರಶ್ನಿಸಿ ನಗರ ಮೂಲದ ವಕೀಲರು ಸಲ್ಲಿಸಿದ್ದ ಪಿಐಎಲ್ ಅನ್ನು ವಿಲೇವಾರಿ ಮಾಡಿದ ಹೈಕೋರ್ಟ್, ಸಂತ್ರಸ್ತೆ ಯುವತಿ ತನ್ನ ಎರಡು ಅರ್ಜಿಗಳಲ್ಲಿ ಎಸ್‍ಐಟಿ ರಚನೆ ಕುರಿತಂತೆ ಪ್ರಶ್ನಿಸಿದ್ದಾರೆ ಎಂದು ತಿಳಿಸಿತು.







