ನಾವು ಕಾಟಾಚಾರಕ್ಕೆ ಸದನಕ್ಕೆ ಬರಬೇಕಾ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪ್ರಶ್ನೆ

ಬೆಂಗಳೂರು, ಮಾ.10: ರಾಜ್ಯ ಸರಕಾರ ಮಂಡಿಸಿರುವ 2.65 ಲಕ್ಷ ಕೋಟಿ ರೂ.ಗಳು, ಅದರಲ್ಲಿ ಬದ್ಧತಾ ವೆಚ್ಚ 2.04 ಲಕ್ಷ ಕೋಟಿ ರೂ.ಗಳು. ಈಗ 72 ಸಾವಿರ ಕೋಟಿ ರೂ.ಸಾಲ ಪಡೆಯಲು ಮುಂದಾಗಿದ್ದಾರೆ. 14,170 ಕೋಟಿ ರೂ.ವಿತ್ತೀಯ ಕೊರತೆಯಿದೆ. ಉಳಿದಂತೆ ನಮಗೆ ಲಭ್ಯವಾಗುವುದು 43,572 ಕೋಟಿ ರೂ.ಗಳು ಮಾತ್ರ. ಇದರಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಜೆಡಿಎಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದರು.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 14ನೆ ಹಣಕಾಸು ಆಯೋಗದಲ್ಲಿ ಕೇಂದ್ರ ಸರಕಾರದಿಂದ ನಮಗೆ ಬರುತ್ತಿದ್ದ ತೆರಿಗೆ ಬಾಬ್ತು ಶೇ.4.72 ರಿಂದ ಶೇ.3.64ಕ್ಕೆ ಕಡಿತ ಮಾಡಲಾಗಿದೆ. ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಸುಮಾರು 3 ಲಕ್ಷ ಕೋಟಿ ರೂ.ಗಳ ತೆರಿಗೆ ಪಾಲು ಹೋಗುತ್ತೆ. ಆದರೆ, ನಮ್ಮ ರಾಜ್ಯಕ್ಕೆ ಬರಬೇಕಿರುವ ನ್ಯಾಯಬದ್ಧವಾದ ತೆರಿಗೆ ಪಾಲು ಮಾತ್ರ ಬರುತ್ತಿಲ್ಲ. ತೆರಿಗೆ ಪಾಲು ಪಡೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸಬೇಕಿದೆ. ಜನಸಂಖ್ಯೆ ಹೆಚ್ಚಿರಬೇಕೆಂದರೆ ನಾವು ಜನಸಂಖ್ಯೆ ಹೆಚ್ಚಳ ಮಾಡಿಕೊಳ್ಳಬೇಕೆ ತೆರಿಗೆ ಪಾಲು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.
ಸದನದ ಬಾವಿಗಿಳಿದು ಧರಣಿ: ಶಿವಲಿಂಗೇಗೌಡ ಮಾತನಾಡುತ್ತಿದ್ದ ವೇಳೆ ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದು ಉಪಸಭಾಧ್ಯಕ್ಷ ಆನಂದ್ ಮಾಮನಿ, ಚರ್ಚೆಯನ್ನು ಬೇಗ ಮುಗಿಸುವಂತೆ ಸೂಚಿಸಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ನಾವು ಕಾಟಾಚಾರಕ್ಕೆ ಸದನಕ್ಕೆ ಬರಬೇಕಾ? ನಮ್ಮ ಮಾತುಗಳನ್ನು ಸದನದಲ್ಲಿ ಹೇಳಲು ಅವಕಾಶವಿಲ್ಲದಿದ್ದರೆ ನಾವು ಯಾತಕ್ಕಾಗಿ ಇಲ್ಲಿ ಶಾಸಕರಾಗಿ ಬಂದು ಕೂರಬೇಕು? ಈ ರೀತಿ ನಮಗೆ ಅಂಕುಶ ಹಾಕುವುದು ಸರಿಯಲ್ಲ. ನಾನು ಧರಣಿ ಕೂರುತ್ತೇನೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಕೆಲಕಾಲ ಉಪಸಭಾಧ್ಯಕ್ಷ ಹಾಗೂ ಶಿವಲಿಂಗೇಗೌಡ ನಡುವೆ ಏರುಧ್ವನಿಯಲ್ಲಿ ಮಾತುಗಳು ನಡೆದವು.
ಬಳಿಕ ಜೆಡಿಎಸ್ ಸದಸ್ಯ ಅನ್ನದಾನಿ ಸದನದ ಬಾವಿಗಿಳಿದು ಶಿವಲಿಂಗೇಗೌಡರನ್ನು ಸಮಾಧಾನ ಪಡಿಸಿ ಅವರ ಸ್ಥಾನಕ್ಕೆ ಕರೆದುಕೊಂಡು ಬಂದರು. ಈ ವೇಳೆ ಶಿವಲಿಂಗೇಗೌಡ ಪರವಾಗಿ ಕಾಂಗ್ರೆಸ್ ಸದಸ್ಯರು ಧ್ವನಿ ಎತ್ತಿ, ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಿ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಅವರು ಬೆಳಕು ಚೆಲ್ಲುತ್ತಿದ್ದಾರೆ. ಪ್ರತಿಪಕ್ಷದ ಶಾಸಕರಾದ ನಾವು ಸದನದಲ್ಲೆ ನಮ್ಮ ಮಾತನ್ನು ಸರಕಾರದ ಮುಂದಿಡಬೇಕು ಎಂದು ಹೇಳಿದರು.
ಆನಂತರ ಶಿವಲಿಂಗೇಗೌಡ ತಮ್ಮ ಮಾತನ್ನು ಮುಂದುವರೆಸಿದರು. ಈ ವೇಳೆ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಮಧ್ಯಪ್ರವೇಶಿಸಿ, ಶಿವಲಿಂಗೇಗೌಡ ಅವರಿಗೆ ಮಾತನಾಡಲು ಅವಕಾಶ ಕೊಡಿ ಅವರೆಲ್ಲ ಮುಂದೆ ನಮ್ಮ ಬಳಿಯೆ ಬರಲಿದ್ದಾರೆ ಎಂದರು. ಇದಕ್ಕೆ ಆಕ್ರೋಶಗೊಂಡ ಶಿವಲಿಂಗೇಗೌಡ ನಿಮ್ಮ ಪಕ್ಷಕ್ಕೆ ಬರುವವರಿಗೆ ಮಾತ್ರ ಸದನದಲ್ಲಿ ಮಾತನಾಡಲು ಅವಕಾಶ ಕೊಡುತ್ತಿದ್ದೀರಾ? ಎಂದು ತಿರುಗೇಟು ನೀಡಿದರು.
ಜಿಎಸ್‍ಟಿಗೆ ಅನುಮತಿ ನೀಡುವ ಮೂಲಕ ರಾಜ್ಯ ಸರಕಾರ ತನ್ನ ಕೈಗಳನ್ನು ಕಟ್ಟಿ ಕೇಂದ್ರ ಸರಕಾರಕ್ಕೆ ಕೊಟ್ಟಿದೆ. ಡಿಸೇಲ್, ಪೆಟ್ರೋಲ್, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆ ಇವುಗಳ ಮೂಲಕ ಬರುವ ಆದಾಯವನ್ನು ರಾಜ್ಯ ಸರಕಾರಗಳಿಗೆ ಬಿಟ್ಟು ಕೊಡದೆ ಹೋಗಿದ್ದರೆ, ರಾಜ್ಯ ಸರಕಾರಗಳ ಪಾಡೇನಾಗಿರುತ್ತಿತ್ತು. ಜಿಎಸ್‍ಟಿ ಮೇಲಿನ ಸೆಸ್‍ನಿಂದಲೆ ನಮಗೆ ಸಾಲ ನೀಡಲಾಗುತ್ತಿದೆ. ಅದು ಕೂಡ ನಮ್ಮಿಂದ ಸಂಗ್ರಹಿಸಿದ ಹಣದಿಂದಲೆ ಎಂದು ಶಿವಲಿಂಗೇಗೌಡ ಹೇಳಿದರು.
ಪ್ರಸಕ್ತ ಸಾಲಿನ ಜೂನ್ ತಿಂಗಳ ಅಂತ್ಯಕ್ಕೆ ಜಿಎಸ್‍ಟಿ ಪರಿಹಾರ ಸ್ಥಗಿತವಾಗುತ್ತದೆ. ಆಮೇಲೆ ಏನು ಮಾಡುತ್ತೀರಾ? ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಈಗ ಪ್ರಸ್ತುತ ನಮ್ಮ ಮುಂದೆ 1.20 ಲಕ್ಷ ಕೋಟಿ ರೂ.ಗಳ ವರ್ಕ್ ಆರ್ಡರ್ ನೀಡಲಾಗಿದೆ. ಆದರೆ, ಬಜೆಟ್‍ನಲ್ಲಿ ಒದಗಿರುವುದು 20 ಸಾವಿರ ಕೋಟಿ ರೂ.ಗಳು. ಎತ್ತಿನಹೊಳೆ ಯೋಜನೆ ಆರಂಭಿಸಿದ್ದು 12 ಸಾವಿರ ಕೋಟಿ ರೂ.ಗಳಿಗೆ, ಈಗ ಅದು 25 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಂಡಿದ್ದರೆ ಎಷ್ಟು ಸಾವಿರ ಕೋಟಿ ರೂ.ಗಳು ನಮಗೆ ಉಳಿಯುತ್ತಿತ್ತು ಎಂದು ಅವರು ಹೇಳಿದರು.







