ಸಾಗರ: ಜೀತದಾಳುಗಳಾಗಿ ಬಂಧಿಯಾಗಿದ್ದ ಛತ್ತಿಸಗಢದ 19 ಮಂದಿಯ ರಕ್ಷಣೆ; ಪ್ರಕರಣ ದಾಖಲು

ಸಾಗರ,ಮಾ.10 : ತಾಲೂಕಿನ ಆವಿನಹಳ್ಳಿಯ ಅಟಲ್ ಬಿಹಾರಿ ವಸತಿ ಶಾಲೆ ನಿರ್ಮಾಣದಲ್ಲಿ ಜೀತದಾಳುಗಳಾಗಿ ಬಂಧಿಯಾಗಿದ್ದ ಛತ್ತಿಸಗಢ ರಾಜ್ಯದ 19 ಜನರನ್ನು ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್. ನೇತೃತ್ವದ ತಂಡ ರಕ್ಷಣೆ ಮಾಡಿ ಬುಧವಾರ ರಾತ್ರಿ ಸರ್ಕಾರಿ ಬಸ್‍ನಲ್ಲಿ ಅವರ ರಾಜ್ಯಕ್ಕೆ ವಾಪಾಸ್ ಕಳಿಸಿಕೊಡಲಾಗಿದೆ.
ಆವಿನಹಳ್ಳಿಯ ಅಟಲ್ ಬಿಹಾರಿ ವಸತಿ ಶಾಲೆ ನಿರ್ಮಾಣ ಕಾರ್ಯಕ್ಕೆ ಛತ್ತಿಸಗಢ ರಾಜ್ಯದ ಸುಖ್ಮಾ ಜಿಲ್ಲೆಯ 19ಜನರನ್ನು ಕೆಲಸಕ್ಕೆ ಕರೆ ತರಲಾಗಿತ್ತು. ಈ ಕಾರ್ಮಿಕರಿಗೆ ಊಟ ವಸತಿ, ಸಂಬಳವನ್ನು ಸಹ ಕೊಡದೇ, ಅವರ ಊರಿಗೂ ಕಳಿಸದೆ ಇಲ್ಲಿ ಬಂಧಿಯಾಗಿರಿಸಿಕೊಂಡು ಕೂಲಿ ಕೆಲಸ ಮಾಡಿಸಿಕೊಳ್ಳಲಾಗುತಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಎಲ್ಲ ಜೀತಾದಾಳುಗಳನ್ನು ಬಂಧಮುಕ್ತಗೊಳಿಸಲಾಗಿದೆ. ಈ ಸಂಬಂಧ ನಾಲ್ಕು ಜನರ ವಿರುದ್ದ ಎಫ್.ಐ.ಆರ್. ದಾಖಲು ಮಾಡಲಾಗಿದ್ದು, ವಿಚಾರಣೆಗೆ ಕರೆಯಲಾಗಿದೆ.
ಜೀತದಾಳುಗಳ ಪೈಕಿ ಆರು ಜನ ಮಹಿಳೆಯರು, ಐವರು ಬಾಲ ಕಾರ್ಮಿಕರು ಮತ್ತು 8ಜನ ಪುರುಷರು ಇದ್ದಾರೆ. ಸುಖ್ಮಾ ಜಿಲ್ಲೆಯ ಉಪ ತಹಶೀಲ್ದಾರ್ ಮತ್ತು ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ಜೀತಕಾರ್ಮಿಕರನ್ನು ಹಸ್ತಾಂತರಿಸಿ, ಛತ್ತಿಸಗಢಕ್ಕೆ ಕರೆದುಕೊಂಡು ಹೋಗಲು ತಾಲ್ಲೂಕು ಆಡಳಿತದಿಂದ ಬಸ್ ಸೌಲಭ್ಯ ಒದಗಿಸಲಾಗಿದೆ.
ಈ ಕುರಿತು ಮಾತನಾಡಿದ ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್. ಛತ್ತಿಸಗಢದಿಂದ 19 ಜನ ಕಾರ್ಮಿಕರನ್ನು ಕರೆದುಕೊಂಡು ಬಂದಿರುವ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲಸಕ್ಕಾಗಿ ಕರೆದುಕೊಂಡು ಬಂದ ಕಾರ್ಮಿಕರಿಗೆ ಸಂಬಳ ಕೊಡದೆ, ಹಳಸಿದ ಊಟವನ್ನು ನೀಡಿ, ಊರಿಗೂ ಹೋಗಲು ಬಿಡುತ್ತಿಲ್ಲ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ಸಂಬಂಧ ಮಾ. 5ರಂದು ಛತ್ತಿಸಗಢದ ಸುಖ್ಮಾ ಜಿಲ್ಲೆಯ ಉಪ ತಹಶೀಲ್ದಾರ್ ಮತ್ತು ಕಾರ್ಮಿಕ ನಿರೀಕ್ಷಕರು ಸಾಗರಕ್ಕೆ ಬಂದಿದ್ದಾರೆ ಎಂದರು.
ಕಾರ್ಮಿಕರನ್ನು ಆವಿನಹಳ್ಳಿಯ ಅಟಲಿ ಬಿಹಾರಿ ವಸತಿ ಶಾಲೆ ನಿರ್ಮಾಣ ಪ್ರದೇಶದಲ್ಲಿ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತಿತ್ತು. ಇವರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಕಳಿಸಿದ್ದು ರಾಮಕಿಶನ್ ಎಂಬ ಬೆಂಗಳೂರಿನ ವ್ಯಕ್ತಿ, ಮ್ಯಾನ್‍ಪವರ್ ಏಜೆನ್ಸಿಯ ಬಾಬು, ರಾಮಕೃಷ್ಣ ಮತ್ತು ತಿರುಪತಿ ಅವರ ಮೇಲೆ ಬಾಲಕಾರ್ಮಿಕರ ಅಪರಾಧ ಕಾಯ್ದೆ, ಜೀತಪದ್ದತಿ ಅಡಿ ಪ್ರಕರಣ ದಾಖಲಿಸಲಾಗಿದೆ. ಜೀತದಾಳುಗಳಾಗಿ ದುಡಿಯುತ್ತಿದ್ದ 19ಜನರಿಗೆ ಊಟ ವಸತಿ ನೀಡಿ, ಬಿಡುಗಡೆ ಪತ್ರವನ್ನು ಕೊಟ್ಟು ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರಿಸಿ, ಛತ್ತಿಸಗಢಕ್ಕೆ ಸರ್ಕಾರಕ್ಕೆ ಕಳಿಸುತ್ತಿದ್ದೇವೆ. ಜೀತದಾಳುಗಳಿಗೆ ಸಂಬಳ ಕೊಡುವುದು ಬಾಕಿ ಇದ್ದು, ಇದನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ವಸೂಲಿ ಮಾಡಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್,ಚಂದ್ರಶೇಖರ್, ಸುಖ್ಮಾ ಜಿಲ್ಲೆಯ ಉಪ ತಹಶೀಲ್ದಾರ್ ಸತಾನಂದನಾಗ್, ಕಾರ್ಮಿಕ ನಿರೀಕ್ಷಕ ಜೆ.ಎಲ್. ದೇವಾಂಗನ್ ಇನ್ನಿತರರು ಹಾಜರಿದ್ದರು.







