ಭವಿಷ್ಯದ ಮೇಲೆ ಪರಿಣಾಮ ಬೀರಲಿರುವ ಫಲಿತಾಂಶ

ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ಭಾರತದ ಭವಿಷ್ಯದ ತಿರುವುಗಳನ್ನು ಹೇಳಿದೆ. ಮುಖ್ಯವಾಗಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಆಪ್ ನಿಧಾನಕ್ಕೆ ಚಿಗುರಿಕೊಳ್ಳುತ್ತಿದೆ. ಪಂಜಾಬ್‌ನಲ್ಲಿ ಅಧಿಕಾರ ಹಿಡಿಯುವ ಮೂಲಕ ಅದು ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ರಾಜ್ಯವೊಂದನ್ನು ಆಳುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಭವಿಷ್ಯದಲ್ಲಿ ಉತ್ತರ ಭಾರತದಲ್ಲಿ ಆಪ್ ವಿಸ್ತರಿಸುವ ಸಾಧ್ಯತೆಗಳನ್ನು ಇದು ಹೇಳುತ್ತಿದೆ. ಆಪ್ ಬೆಳೆದಷ್ಟೂ ಕಾಂಗ್ರೆಸ್ ಮೂಲೆಗುಂಪಾಗಲಿದೆ. ಮುಂದಿನ ದಿನಗಳಲ್ಲಿ ಆಪ್ ಬಿಜೆಪಿಗೆ ಸಮ ಎದುರಾಳಿಯಾಗಿ ಬೆಳೆಯಲಿದೆಯೇ? ಅಥವಾ ಬಿಜೆಪಿಯ ಬಿ. ಟೀಮ್ ಆಗಿ ಅದು ದೇಶಾದ್ಯಂತ ವಿಸ್ತರಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕು. ಪಂಜಾಬ್‌ನ ಮುಖ್ಯಮಂತ್ರಿಯಾಗಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿರುವುದರಿಂದ, ಕೇಜ್ರಿವಾಲ್ ದಿಲ್ಲಿಯ ಡಮ್ಮಿ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಪಂಜಾಬ್‌ನ ನೂತನ ಮುಖ್ಯಮಂತ್ರಿ ಮತ್ತು ಕೇಜ್ರಿವಾಲ್ ನಡುವೆ ಶೀಘ್ರದಲ್ಲೇ ಮುನಿಸು ತಲೆದೋರಿದರೆ ಅಚ್ಚರಿಯೇನೂ ಇಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ ಅವರು ರಾಜಕೀಯವಾಗಿ ಅನನುಭವಿ. ಪಂಜಾಬ್‌ನಂತಹ ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆಯೇ? ಎನ್ನುವುದನ್ನೂ ಕಾಲವೇ ಹೇಳಬೇಕು. ಒಟ್ಟಿನಲ್ಲಿ ಪಂಜಾಬ್ ಫಲಿತಾಂಶ ದೇಶದ ರಾಜಕೀಯಕ್ಕೆ ಒಂದು ಹೊಸ ತಿರುವನ್ನು ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಉತ್ತರ ಪ್ರದೇಶದ ಫಲಿತಾಂಶ ಭವಿಷ್ಯದ ಲೋಕಸಭಾ ಚುನಾವಣೆಯ ಮೇಲೆ ತನ್ನದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ರಾಜಕೀಯ ಪಂಡಿತರು ನಂಬಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಕಾರಣಗಳನ್ನು ಚರ್ಚಿಸುವ ಸಂದರ್ಭದಲ್ಲಿ ರಾಜಕೀಯ ಪಂಡಿತರು ತಡವರಿಸುತ್ತಿದ್ದಾರೆ. ಕೊರೋನ ಲಾಕ್‌ಡೌನ್‌ನಿಂದಾಗಿ ಅತ್ಯಂತ ಭೀಕರ ಪರಿಣಾಮಗಳನ್ನು ಎದುರಿಸಿದ ರಾಜ್ಯಗಳಲ್ಲಿ ಉತ್ತರ ಪ್ರದೇಶ ಒಂದು. ಹಿಂಸಾಚಾರ, ಕೋಮುಗಲಭೆಗಳಿಂದ ಸಂತ್ರಸ್ತಗೊಂಡ ನೆಲ ಅದು. ದಲಿತರ ಮೇಲಿನ ಅತ್ಯಾಚಾರ, ರೈತರ ಮೇಲಿನ ದೌರ್ಜನ್ಯಗಳಿಗಾಗಿಯೂ ವಿಶ್ವ ಮಟ್ಟದಲ್ಲಿ ಕುಖ್ಯಾತಿಯನ್ನು ಪಡೆದ ರಾಜ್ಯ. ಆರೋಗ್ಯ, ಶಿಕ್ಷಣ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿನ್ನಡೆ ಸಾಧಿಸಿದ ಆರೋಪಗಳನ್ನು ಯೋಗಿ ಸರಕಾರ ಹೊತ್ತುಕೊಂಡಿದೆ. ಬಿಜೆಪಿ ಇಷ್ಟೊಂದು ಸಲೀಸಾಗಿ ಗೆಲ್ಲುವುದಕ್ಕೆ ಕಾರಣವೇನು? ಹಿಂದುಳಿದ ವರ್ಗವನ್ನು ಬಿಜೆಪಿ ತನ್ನೆಡೆಗೆ ಸೆಳೆದ ಬಗೆ ಹೇಗೆ? ಎನ್ನುವುದರ ಬಗ್ಗೆ ರಾಜಕೀಯ ತಜ್ಞರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಫಲಿತಾಂಶಕ್ಕೆ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಚುನಾವಣೆಯ ಕೊನೆಯ ಕ್ಷಣದಲ್ಲಿ ಸರಕಾರ ಬಡವರಿಗೆ ನೀಡಿದ ನೆರವು ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಮೋದಿಯ ಆಡಳಿತದಲ್ಲಿ ನಡೆದಿದೆ ಎಂದು ನಂಬಿಸಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಫಲಿತಾಂಶವನ್ನು ಕೆಲವರು ಸಮರ್ಥಿಸುತ್ತಿದ್ದಾರೆ.
ಚುನಾವಣೆಯ ಸೋಲು ಗೆಲುವುಗಳನ್ನು ನಿರ್ಧರಿಸುವುದು ಕ್ರೀಮ್ ಲೇಯರ್‌ನಲ್ಲಿರುವ ಪ್ರಬುದ್ಧ ಮತದಾರರು ಅಲ್ಲ ಎನ್ನುವುದನ್ನು ನಾವು ಮೊದಲು ಅರಿತುಕೊಳ್ಳಬೇಕಾಗಿದೆ. ಚುನಾವಣೆಯ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸುವ ತಳಸ್ತರದ ಮತದಾರರು ತಮ್ಮ ಆಯ್ಕೆಯನ್ನು ಸ್ವಯಂ ನಿರ್ಧರಿಸುವುದಿಲ್ಲ. ಅವರನ್ನು ಬೇರೆ ಬೇರೆ ರೀತಿಯ ಸಂಸ್ಥೆಗಳು ನಿಯಂತ್ರಿಸುತ್ತವೆ ಮತ್ತು ಯಾರಿಗೆ ಮತ ಹಾಕಬೇಕು ಎನ್ನುವುದನ್ನು ಅವರ ಬಾಯಿಯಿಂದ ಹೇಳಿಸುತ್ತವೆ. ಜಾತಿ ಸಂಘಟನೆಗಳು, ಸ್ಥಳೀಯ ಭೂಮಾಲಕ ವರ್ಗ, ಬೇರೆ ಬೇರೆ ಹಿತಾಸಕ್ತಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ. ಅನೇಕ ಸಂದರ್ಭದಲ್ಲಿ ಜಾತಿ ಅಸ್ಮಿತೆಗಳು ಜಾಗೃತವಾದಾಗ ಈ ಸಮುದಾಯ ಒಂದಾಗಿ ತಮ್ಮವರಿಗೇ ಮತ ಹಾಕುತ್ತವೆ. ಅಂತಹ ಅಸ್ಮಿತೆಗಳು ಜಾಗೃತವಾಗದೇ ಇರುವ ಸಂದರ್ಭದಲ್ಲಿ, ಯಾರು ಗೆಲ್ಲಬೇಕು ಎನ್ನುವುದನ್ನು ನಿರ್ಧರಿಸುವುದು ಹಣ. ಈ ಬಾರಿ ಕೊರೋನ ಲಾಕ್‌ಡೌನ್‌ನಿಂದಾಗಿ ತಳವರ್ಗ ಭಾರೀ ಆರ್ಥಿಕ ಸಂಕಷ್ಟಗಳಿಂದ ಕಂಗೆಟ್ಟಿವೆ. ಈ ಸಂಕಟಗಳಿಗೆಲ್ಲ ಸರಕಾರ ಕಾರಣ ಎನ್ನುವ ಅಂಶ ಅವರಿಗೆ ಎಷ್ಟರ ಮಟ್ಟಿಗೆ ತಲುಪಿದೆ? ಅದು ತಲುಪುವುದು ಮಾಧ್ಯಮಗಳ ಮೂಲಕ. ಸಣ್ಣ ಗುಡಿಸಲಲ್ಲಿರುವ ಟಿವಿಗಳು ಸರಕಾರದ ಸಾಧನೆಗಳನ್ನು ಹಗಲು ರಾತ್ರಿ ಭಜನೆ ಮಾಡುತ್ತಿರುತ್ತವೆ. ಆದುದರಿಂದ ಮೇಲ್ ಸ್ತರದಲ್ಲಿ ನಡೆಯುವ ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಣೆಗಳೆಲ್ಲ ಇವರನ್ನು ಮುಟ್ಟುವುದಿಲ್ಲ. ಇವರನ್ನು ತಲುಪುವುದು, ಪ್ರತಿನಿತ್ಯ ಮನರಂಜಿಸುವುದು ಟಿವಿಯಲ್ಲಿ ಚೀರಾಡುತ್ತಿರುವ ಪತ್ರಕರ್ತ ಮಾತ್ರ. ಅವನು ಒಂದಲ್ಲ ಒಂದು ರೀತಿಯಲ್ಲಿ ಸರಕಾರದ ಪರವಾಗಿ ಅಭಿಪ್ರಾಯಗಳನ್ನು ಬಿತ್ತುತ್ತಲೇ ಇರುತ್ತಾನೆ. ಬಹುತೇಕ ತಳಸ್ತರದ ಜನರನ್ನು ತಲುಪುವ ಎಲ್ಲ ಮಾಧ್ಯಮಗಳು ಬಿಜೆಪಿಯ ಹಿಡಿತದಲ್ಲಿರುವ ಕಾರಣ ಚುನಾವಣೆಯಲ್ಲಿ ಅದು ಬಿಜೆಪಿಗೆ ಪೂರಕವಾಗಿ ಕೆಲಸ ಮಾಡಿತು.
ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ತಲುಪುವ ಹಣದ ಪ್ರಮಾಣವೇ ಅಂತಿಮವಾಗಿ ಆಯಾ ಕ್ಷೇತ್ರದ ಮತಗಳನ್ನು ನಿರ್ಧರಿಸುತ್ತದೆ. ನೋಟು ನಿಷೇಧದ ಬಳಿಕ ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳು ಆರ್ಥಿಕವಾಗಿ ಸೊರಗಿವೆ ಮಾತ್ರವಲ್ಲ, ಬಿಜೆಪಿ ವಿಶ್ವದಲ್ಲೇ ಅತಿ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ದೇಶ ಆರ್ಥಿಕವಾಗಿ ನೆಲಕಚ್ಚಿದ ಹೊತ್ತಿನಲ್ಲೂ ನೂರಾರು ಕೋಟಿ ರೂಪಾಯಿ ಚೆಲ್ಲಿ ಶಾಸಕರನ್ನು ಕೊಂಡುಕೊಳ್ಳುವ ಶಕ್ತಿ ಬಿಜೆಪಿಯದಾಗಿತ್ತು. ಕಳೆದ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಯಥೇಚ್ಛ ಹಣವನ್ನು ಬಿಜೆಪಿ ಸುರಿದಿದೆ. ಗುಪ್ತಗಾಮಿನಿಯಾಗಿ ಹರಿದ ಹಣವೇ ಜನರನ್ನು ಬಿಜೆಪಿ ಪರವಾಗಿಸಿದೆ. ಫೇಸ್‌ಬುಕ್, ವಾಟ್ಸ್ ಆ್ಯಪ್‌ನಲ್ಲಿ ಸಕ್ರಿಯವಾಗಿರದ ಈ ಜನರು ಬಿಜೆಪಿಯ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ‘ಮೊದಲು ಜನರನ್ನು ಹಸಿವಿಗೆ ದೂಡುವುದು. ಕೊನೆಯ ಕ್ಷಣದಲ್ಲಿ ತಟ್ಟೆಗೆ ಊಟ ಬಡಿಸಿ ಅನ್ನದಾನಿ’ಯಾಗಿ ಬಿಂಬಿಸಿಕೊಳ್ಳುವುದು ಬಿಜೆಪಿ ಅನುಸರಿಸಿಕೊಂಡು ಬಂದ ರಾಜಕೀಯ ತಂತ್ರ. ಇಂದಿಗೂ ಚುನಾವಣೆಯ ಸಂದರ್ಭದಲ್ಲಿ ತಮ್ಮ ಮತವನ್ನು ಒಂದು ಸಾವಿರ ರೂಪಾಯಿಗಾಗಿ ಮಾರಿಕೊಳ್ಳುವ ಕೋಟ್ಯಂತರ ಜನರು ಈ ದೇಶದಲ್ಲಿದ್ದಾರೆ. ಯಾಕೆಂದರೆ, ಚುನಾವಣೆ ಅವರ ಬದುಕಿನಲ್ಲಿ ತರುವ ಬದಲಾವಣೆ ಈ ಒಂದು ಸಾವಿರ ರೂಪಾಯಿ ಮಾತ್ರ ಎಂದು ಅವರು ಬಲವಾಗಿ ನಂಬಿದ್ದಾರೆ.
ಇದೇ ಸಂದರ್ಭದಲ್ಲಿ ರಾಮಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಇತ್ಯಾದಿಗಳು ಚುನಾವಣೆಯಲ್ಲಿ ತನ್ನದೇ ಪರಿಣಾಮವನ್ನು ಬೀರಿವೆ. ಬಹಿರಂಗ ಪ್ರಚಾರದಲ್ಲಿ ಇದು ದೊಡ್ಡ ಮಟ್ಟದಲ್ಲಿ ಕಾಣಿಸದೇ ಇದ್ದರೂ, ಆರೆಸ್ಸೆಸ್‌ನಂತಹ ಸಂಘಟನೆಗಳು ತಮ್ಮ ಮನೆ ಮನೆ ಪ್ರಚಾರದಲ್ಲಿ ಇದನ್ನು ಬಳಸಿಕೊಂಡಿವೆ. ತಕ್ಷಣಕ್ಕೆ ಕೈಗೆ ಬಂದು ಬೀಳುವ ಹಣ ಮತ್ತು ದ್ವೇಷ ರಾಜಕಾರಣದ ಸಮನ್ವಯದ ಫಲವೇ ಉತ್ತರ ಪ್ರದೇಶದ ಫಲಿತಾಂಶವಾಗಿದೆ. ಇವುಗಳ ನಡುವೆ ಗಂಗಾನದಿಯಲ್ಲಿ ತೇಲಿದ ಹೆಣಗಳು ಕಾಣೆಯಾಗಿವೆ. ‘ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಆಗಿದೆ’ ಇಂತಹ ಆರೋಪ ಪ್ರತಿ ಫಲಿತಾಂಶದ ಬಳಿಕ ಮುನ್ನೆಲೆಗೆ ಬರುತ್ತದೆ. ಚುನಾವಣೆಗೆ ಮುನ್ನ ಇಂತಹ ಆರೋಪ ಮಾಡಿ ಎಲ್ಲ ವಿರೋಧ ಪಕ್ಷಗಳು ಇವಿಎಂ ಒಂದಾಗಿ ಧ್ವನಿಯೆತ್ತಿದರೆ ಅದನ್ನು ಸಮರ್ಥಿಸಬಹುದು. ಸೋತ ಬಳಿಕ ಇವಿಎಂ ಬಗ್ಗೆ ಮಾಡುವ ಆರೋಪಗಳಿಗೆ ವಿಶ್ವಾಸಾರ್ಹತೆಯಿಲ್ಲ. ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಇವಿಎಂ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದ ಅನುಮಾನಗಳಿವೆ. ಈವರೆಗಿನ ತನ್ನ ಗೆಲುವನ್ನು ‘ವಿಶ್ವಾಸಾರ್ಹ ಗೆಲುವು’ ಎಂದು ವಿರೋಧ ಪಕ್ಷಗಳಿಗೆ ಸಾಬೀತು ಮಾಡುವುದಕ್ಕಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಮತಪತ್ರಗಳ ಮೂಲಕ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬೇಡ ಎನ್ನುವ ಚಳವಳಿ ಇಂದಿನಿಂದಲೇ ದೇಶಾದ್ಯಂತ ಆರಂಭವಾಗಬೇಕು. ನಿಜಕ್ಕೂ ಹ್ಯಾಕ್ ಆಗಿರುವುದು ಮತಯಂತ್ರವೋ ಅಥವಾ ಜನಸಾಮಾನ್ಯರ ಮೆದುಳೋ ಎನ್ನುವುದು ಆಗ ಸ್ಪಷ್ಟವಾಗಿ ಬಿಡಬಹುದು.







