ಪಟಿಯಾಲದಲ್ಲಿ ಸೋತ ಮಾಜಿ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರ ಏಳುಬೀಳುಗಳ ಹಿನ್ನೋಟ

photo courtesy:twitter
ಚಂಡಿಗಡ,ಮಾ.10: ವಿಧಾನಸಭಾ ಚುನಾವಣೆಗಳಲ್ಲಿ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಟಿಯಾಲಾ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಅಜಿತಪಾಲ್ ಸಿಂಗ್ ಕೊಹ್ಲಿ ಅವರಿಂದ ಪರಾಜಿತಗೊಂಡಿದ್ದಾರೆ.
ಸಿಂಗ್ 2002ರಿಂದ 2007 ಮತ್ತು ಮಾರ್ಚ್ 2017ರಿಂದ 2019ರವರೆಗೆ ಪಂಜಾಬ ಮುಖ್ಯಮಂತ್ರಿಯಾಗಿದ್ದರು. ಅವರ ನಾಯಕತ್ವದಲ್ಲಿ 2017ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆದರೆ ಪಂಜಾಬ ಕಾಂಗ್ರೆಸ್ನಲ್ಲಿಯ ಆಂತರಿಕ ಕಚ್ಚಾಟ ಮತ್ತು ನವಜೋತ್ ಸಿಂಗ್ ಅವರಿಂದ ಪದೇಪದೇ ದಾಳಿಗಳ ಬಳಿಕ ಅಮರಿಂದರ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು. ಬಳಿಕ ಅವರು ತನ್ನದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಸ್ಥಾಪಿಸಿದ್ದರು.
1980ರಲ್ಲಿ ಮೊದಲ ಬಾರಿಗೆ ಸಂಸದರಾಗಿದ್ದ ಅಮರಿಂದರ್ ಪಂಜಾಬ್ ಸಮಸ್ಯೆಯನ್ನು ಬಗೆಹರಿಸಲು ಮಾತುಕತೆಗಳಲ್ಲಿ ಭಾಗಿಯಾಗಿದ್ದರು. ಆದರೆ ಆಪರೇಷನ್ ಬ್ಲೂ ಸ್ಟಾರ್ ಬಳಿಕ ಗಾಂಧಿ ಕುಟುಂಬದ ಆಪ್ತ ಸ್ನೇಹಿತರಾಗಿದ್ದರೂ ಪಕ್ಷಕ್ಕೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1984ರ ಬ್ಲೂ ಸ್ಟಾರ್ ಕಾರ್ಯಾಚರಣೆ ಮತ್ತು ಬರ್ಗರಿ ದೈವನಿಂದೆ ಪ್ರಕರಣ ಅನುಕ್ರಮವಾಗಿ ಕಾಂಗ್ರಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್ಎಡಿ) ವಿರುದ್ಧ ಅಲೆಗಳನ್ನು ಹುಟ್ಟುಹಾಕಿದ್ದರೂ ಇವೆರಡೂ ಘಟನೆಗಳ ಹಿನ್ನೆಲೆಯಲ್ಲಿ ನಿರ್ಗಮನದ ಬಳಿಕ ಅಮರಿಂದರ್ ಅಗ್ರ ನಾಯಕನಾಗಿ ಹೊರಹೊಮ್ಮಿದ್ದರು.
ಎಸ್ಎಡಿಗೆ ಸೇರಿದ್ದ ಅವರು 1985ಲ್ಲಿ ಸುರ್ಜಿತ ಸಿಂಗ್ ಬರ್ನಾಲಾ ಅವರ ಸರಕಾರದಲ್ಲಿ ಸಚಿವರೂ ಆಗಿದ್ದರು. ಬರ್ನಾಲಾರ ಆದೇಶದ ಮೇರಗೆ ಪೊಲೀಸರು ದರ್ಬಾರ್ ಸಾಹಿಬ್ ಅನ್ನು ಪ್ರವೇಶಿಸಿದ್ದರಿಂದ ಏಳು ತಿಂಗಳ ಬಳಿಕ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದು ಅವರನ್ನು ಸಿಖ್ ನಾಯಕನನ್ನಾಗಿಸಿತ್ತು. ಈ ಹೆಜ್ಜೆ ಅವರು ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಲು ನೆರವಾಗಿತ್ತು.
ವರದಿಗಳು ಹೇಳಿರುವಂತೆ ಸಿಕ್ಖರು ಅಮರಿಂದರ್ ರನ್ನು ಒಪ್ಪಿಕೊಂಡಿದ್ದರಿಂದಲೇ 1999ರಿಂದೀಚಿಗೆ ಪಂಜಾಬ್ ನಲ್ಲಿ ಕಾಂಗ್ರೆಸಿನ ಪುನರುತ್ಥಾನ ಸಾಧ್ಯವಾಗಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಅರುಣ ಜೇಟ್ಲಿಯವರನ್ನು ಸೋಲಿಸಿದ್ದ ಅಮರಿಂದರ್ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷರೂ ಆಗಿದ್ದರು.
ಕರ್ತಾರ್ಪುರ್ ಸಾಹಿಬ್ ಗೆ ಕಾರಿಡಾರ್ ಅನ್ನು ತೆರೆಯುವುದನ್ನು ಬಹಿರಂಗವಾಗಿ ಟೀಕಿಸಿದ ಬಳಿಕ ಅಮರಿಂದರ್ ಅವರ ಅವನತಿ ಆರಂಭಗೊಂಡಿತ್ತು. ನೂತನ ಪಕ್ಷವನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದ ಸಂದರ್ಭ 2022ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದೂ ಹೇಳಿದ್ದರು. ಕೃಷಿಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಪಂಜಾಬಿನ ಹೆಚ್ಚಿನ ಜನರು ಬೆಂಬಲಿಸಿದ್ದರಿಂದ ಅವರ ಈ ನಡೆಯು ಭಾರೀ ಹೊಡೆತವನ್ನು ನೀಡಿತ್ತು.







