ಉಕ್ರೇನ್: ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ವೈಮಾನಿಕ ದಾಳಿ
17ಕ್ಕೂ ಹೆಚ್ಚು ಮಂದಿಗೆ ಗಾಯ

photo courtesy:twitter
ಕೀವ್, ಮಾ.10: ಉಕ್ರೇನ್ನ ಬಂದರು ನಗರ ಮರಿಯುಪೋಲ್ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ, ಬುಧವಾರ ನಗರದ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಆಸ್ಪತ್ರೆಗಳ ಮೇಲೆ ರಷ್ಯಾ ನೇರವಾಗಿ ನಡೆಸಿದ ದಾಳಿ ಅತ್ಯಂತ ಖಂಡನೀಯ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆ ರಷ್ಯಾ ದೇಶಕ್ಕೆ ಬೆದರಿಕೆ ಒಡ್ಡಲು ಸಾಧ್ಯವೇ? ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆಗೂ ಹೆದರುವ, ಅದನ್ನು ನಾಶಗೊಳಿಸುವ ಇದು ಯಾವ ಸೀಮೆಯ ದೇಶ ಎಂದವರು ಪ್ರಶ್ನಿಸಿದ್ದಾರೆ. ಇನ್ನು ಮುಂದೆ ಈ ರೀತಿಯ ನರಮೇಧವನ್ನು ಮುಂದುವರಿಸಲು ಸಾಧ್ಯವಾಗದಂತೆ ರಷ್ಯಾದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ಅವರು, ಬಾಂಬ್ ದಾಳಿಯಲ್ಲಿ ಹಾನಿಗೊಳಗಾದ ಆಸ್ಪತ್ರೆಯ ವೀಡಿಯೊ ತುಣುಕನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
ವೈಮಾನಿಕ ದಾಳಿಯ ಬಳಿಕ ಆಸ್ಪತ್ರೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು ಸ್ಫೋಟದ ತೀವ್ರತೆಯಿಂದ ಭೂಮಿ ಕಂಪಿಸಿರುವುದು ಸುಮಾರು 1 ಮೈಲು ದೂರದಲ್ಲೂ ಅನುಭವಕ್ಕೆ ಬಂದಿದೆ. ಆಸ್ಪತ್ರೆಯ ಕಿಟಕಿಗಳಿಗೆ ಹಾನಿಯಾಗಿದ್ದು ಕಟ್ಟಡದ ಮುಂದಿನ ಭಾಗ ತೀವ್ರ ಹಾನಿಗೊಳಗಾಗಿದೆ. ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಸುಟ್ಟುಹೋಗಿವೆ. ಸ್ಫೋಟ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಯೋಧರು ಗಾಯಾಳುಗಳನ್ನು ಹಾಗೂ ಆಸ್ಪತ್ರೆಯಲ್ಲಿ ದಾಖಲಾದವರನ್ನು ಅಲ್ಲಿಂದ ಸ್ಥಳಾಂತರಿಸಿದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಟ್ರೆಚರ್ ಮೂಲಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆರಿಗೆ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆ ವಿಭಾಗವೂ ಇದೆ. ಅದೃಷ್ಟವಶಾತ್ ಇದುವರೆಗೆ ಯಾರೂ ಸಾವನ್ನಪ್ಪಿರುವ ಮಾಹಿತಿಯಿಲ್ಲ. ಯಾವುದೇ ಮಕ್ಕಳೂ ಗಾಯಗೊಂಡಿಲ್ಲ . ಬಾಂಬ್ ಎಲ್ಲಿಗೆ ಬೀಳಲಿದೆ ಎಂದು ರಷ್ಯಾದ ಪೈಲಟ್ಗೆ ಸ್ಪಷ್ಟವಾಗಿ ತಿಳಿದಿತ್ತು ಎಂದು ಡೊನೆಟ್ಸ್ಕ್ ವಲಯದ ಮುಖ್ಯಸ್ಥ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ.
ಇವತ್ತು ರಷ್ಯಾ ದೊಡ್ಡ ಅಪರಾಧ ಎಸಗಿದೆ. ಇದು ಯಾವುದೇ ಸಮರ್ಥನೆ ಇಲ್ಲದ ಯುದ್ಧಾಪರಾಧವಾಗಿದೆ ಎಂದು ಉಕ್ರೇನ್ ನ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಕೀವ್ ನ ಪಶ್ಚಿಮದಲ್ಲಿರುವ ಝೈಟೊಮಿರ್ ನಗರದಲ್ಲಿರುವ 2 ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆದಿದೆ. ಇದರಲ್ಲಿ ಒಂದು ಮಕ್ಕಳ ಆಸ್ಪತ್ರೆಯಾಗಿದೆ. ಸಾವು ನೋವುಗಳ ಸಂಖ್ಯೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ನಗರದ ಮೇಯರ್ ಸೆರಿಲ್ ಸುಖೊಮ್ಲಿನ್ ಹೇಳಿದ್ದಾರೆ.
ದುರ್ಬಲರು ಮತ್ತು ಅಸಹಾಯಕರನ್ನು ಗುರಿಯಾಗಿಸುವುದಕ್ಕಿಂತ ನೀಚ ಕೆಲಸ ಬೇರೊಂದಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದು, ಈ ಭಯಾನಕ ಅಪರಾಧಕ್ಕಾಗಿ ರಷ್ಯಾ ಅಧ್ಯಕ್ಷ ಪುಟಿನ್ ನನ್ನು ಹೊಣೆಗಾರರನ್ನಾಗಿಸಬೇಕು ಎಂದು ಆಗ್ರಹಿಸಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾದಂದಿನಿಂದ ಆರೋಗ್ಯ ವ್ಯವಸ್ಥೆ, ಆಂಬ್ಯುಲೆನ್ಸ್ ಮೇಲೆ 18 ದಾಳಿ ನಡೆದು, 10 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದರಲ್ಲಿ ಹೆರಿಗೆ ಆಸ್ಪತ್ರೆಯ ಮೇಲಿನ ದಾಳಿಯೂ ಸೇರಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ರಶ್ಯದ ವಿವೇಚನೆಯಿಲ್ಲದ ದಾಳಿಗಳು ಖಂಡನೀಯ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಪ್ರತಿಕ್ರಿಯಿಸಿದ್ದಾರೆ.







