ರಾಜಸ್ಥಾನ ‘ಗಂಡಸರ ರಾಜ್ಯ’: ಅತ್ಯಾಚಾರವನ್ನು ಸಮರ್ಥಿಸಿದ ಸಚಿವ !

ಹೊಸದಿಲ್ಲಿ, ಮಾ. 10: ‘ರಾಜಸ್ಥಾನ ಗಂಡಸರ ರಾಜ್ಯ. ಆದುದರಿಂದ ಇದಕ್ಕೆ ನಾವು ಏನು ಮಾಡಲು ಸಾಧ್ಯ?’ ಎಂದು ಅತ್ಯಾಚಾರವನ್ನು ರಾಜಸ್ಥಾನದ ಕಾಂಗ್ರೆಸ್ ಸಚಿವ ಶಾಂತಿ ಕುಮಾರ್ ಸಮರ್ಥಿಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ ವಿಧಾನ ಸಭೆಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ರಾಜಸ್ಥಾನದ ಕಾಂಗ್ರೆಸ್ ಸಚಿವ ಶಾಂತಿ ಕುಮಾರ್ ಧರಿವಾಲ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರದ ಕುರಿತು ನೀಡಿದ ಅನುಚಿತ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ಪೊಲೀಸ್ ಹಾಗೂ ಜೈಲು ಇಲಾಖೆಯ ಅನುದಾನದ ಬಗ್ಗೆ ಚರ್ಚೆಯ ಸಂದರ್ಭದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಧರಿವಾಲ್, ನಾವು (ರಾಜಸ್ಥಾನ) ಅತ್ಯಾಚಾರದಲ್ಲಿ ಮೊದಲ ಸ್ಥಾನದಲ್ಲಿದ್ದೇವೆ.
ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಸದಸ್ಯರೊಬ್ಬರು ಗೊಣಗಿದ ಬಳಿಕ ಧರಿವಾಲ್ ಅವರು ಅವರತ್ತ ತಿರುಗಿ, ‘‘ರಾಜಸ್ಥಾನ ಗಂಡಸರ ರಾಜ್ಯ. ನಾವು ಇದಕ್ಕೆ ಏನು ಮಾಡಲು ಸಾಧ್ಯ?’’ ಎಂದು ಪ್ರಶ್ನಿಸಿದರು. ಇದು ಕೆಲವು ಶಾಸಕರ ನಗುವಿಗೆ ಕಾರಣವಾಗಿತ್ತು. ಒಂದು ದಿನದ ಬಳಿಕ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಅವರು ಈ ಅವಮಾನಕರ ಹೇಳಿಕೆಗೆ ಧರಿವಾಲ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದು ಮಹಿಳೆ ಹಾಗೂ ಪುರುಷನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಹೇಳಿಕೆ ಎಂದು ಅವರು ಆರೋಪಿಸಿದ್ದಾರೆ.







