ಯುದ್ಧದ ಅಪಾಯಗಳ ಹಿನ್ನೆಲೆಯಲ್ಲಿ ಅಧಿಕ 'ಮರುವಿಮೆ ಶುಲ್ಕಗಳನ್ನು' ಎದುರಿಸುತ್ತಿರುವ ಭಾರತೀಯ ಕಂಪನಿಗಳು

photo pti
ಹೊಸದಿಲ್ಲಿ: ರಷ್ಯದಿಂದ ಉಕ್ರೇನ್ ಆಕ್ರಮಣ ಮತ್ತು ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ಹೇರಿರುವ ತೀವ್ರ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಾಗತಿಕ ಮರುವಿಮೆದಾರರು ಮುಂದಿನ ದಿನಗಳಲ್ಲಿ ಭಾರತೀಯ ಉದ್ಯಮಗಳಿಗಾಗಿ ಕಠಿಣಗೊಳ್ಳುತ್ತಿರುವ ವಿಮೆ ದರಗಳು ಮತ್ತು ಬಿಗಿಯಾದ ನಿಬಂಧನೆಗಳ ಬಗ್ಗೆ ಭಾರತೀಯ ಸಾಮಾನ್ಯ ವಿಮೆ ಕಂಪನಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.
‘ಯಾವುದೇ ತೊಡಕುಗಳನ್ನು ತಪ್ಪಿಸಲು ತಮ್ಮ ವಿಮೆಗಳನ್ನು ಮೊದಲೇ ನವೀಕರಿಸುವಂತೆ ನಾವು ನಮ್ಮ ಗ್ರಾಹರಿಗೆ ಸೂಚಿಸಿದ್ದೇವೆ’ ಎಂದು ದೇಶದ ಅತಿದೊಡ್ಡ ಸಾಮಾನ್ಯ ವಿಮೆ ಕಂಪನಿಯಾಗಿರುವ ನ್ಯೂ ಇಂಡಿಯಾ ಅಷ್ಯೂರನ್ಸ್ (ಎನ್ಐಎ)ನ ಅಧಿಕಾರಿಯೋರ್ವರು ತಿಳಿಸಿದರು. ಭಾರತೀಯ ವಿಮೆ ಕಂಪನಿಗಳು ಸಾಮಾನ್ಯವಾಗಿ ಅಪಾಯ ಶಮನ ಕ್ರಮವಾಗಿ ತಮ್ಮ ವ್ಯವಹಾರಗಳಿಗೆ ಜಾಗತಿಕ ಮರುವಿಮೆದಾರರ ಬಳಿ ಮರುವಿಮೆ ಮಾಡಿಸುತ್ತವೆ.
ಭಾರತದಲ್ಲಿ ಬೃಹತ್ ವಿಮೆ ಖಾತೆಗಳಲ್ಲೊಂದಾಗಿರುವ ಏರ್ ಇಂಡಿಯಾ 10 ಶತಕೋಟಿ ಡಾ.ಗಳ ವಿಮೆ ರಕ್ಷಣೆಯನ್ನು ಹೊಂದಿದ್ದು, ಅದನ್ನು ಎ.1ರೊಳಗೆ ನವೀಕರಿಸಬೇಕಿದೆ. ಟಾಟಾ ಗ್ರೂಪ್ ಇತ್ತೀಚಿಗೆ ಸರಕಾರದಿಂದ ಸ್ವಾಧೀನ ಪಡಿಸಿಕೊಂಡಿರುವ ಏರ್ ಇಂಡಿಯಾಕ್ಕೆ ಎನ್ಐಎ ಪ್ರಾಥಮಿಕ ವಿಮೆದಾರನಾಗಿದೆ. ಭಾರತೀಯ ಗ್ರಾಹಕರ ಮೇಲೆ ತಕ್ಷಣಕ್ಕೆ ಪರಿಣಾಮ ಉಂಟಾಗುವುದಿಲ್ಲವಾದರೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಥಿತಿ ಇನ್ನಷ್ಟು ಉಲ್ಬಣಿಸಬಹುದು,ಹೀಗಾಗಿ ಅವರು ತ್ವರಿತವಾಗಿ ಮರುವಿಮೆ ಮಾಡಿಸುವ ಅಗತ್ಯವಿದೆ ಎಂದು ಭಾರತದಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ಜಾಗತಿಕ ಮರುವಿಮೆ ಕಂಪನಿಯೊಂದರ ಸಿಇಓ ಹೇಳಿದರು.
ರಷ್ಯದ ಸಹಭಾಗಿತ್ವದೊಂದಿಗಿನ ಭಾರತೀಯ ಜಂಟಿ ಉದ್ಯಮಗಳ ವ್ಯವಹಾರಗಳಿಗೂ ನಿರ್ಬಂಧಗಳು ಹೊಡೆತವನ್ನು ನೀಡಲಿವೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದರು.
ಮರುವಿಮೆ ಮಾರುಕಟ್ಟೆಯ ದೃಷ್ಟಿಕೋನದಂತೆ ತಕ್ಷಣವೇ ಆತಂಕಗೊಳ್ಳಲು ಯಾವುದೇ ಕಾರಣಗಳಿಲ್ಲ ಎಂದು ಸರಕಾರಿ ಸ್ವಾಮ್ಯದ ವಿಮೆ ಕಂಪನಿ ಜಿಐಸಿ ಆರ್ ಇ ಹೇಳಿದೆ. ಜಿಐಸಿ ಆರ್ಇ ಮಾಸ್ಕೋದಲ್ಲಿ ತನ್ನ ರಷ್ಯನ್ ಅಂಗಸಂಸ್ಥೆಯನ್ನು ಹೊಂದಿದೆ.
ಅಂತರರಾಷ್ಟ್ರೀಯ ನಿರ್ಬಂಧಗಳ ಹಿನ್ನೆಲೆಯಲ್ಲಿ ಸ್ಥಳೀಯ ಉದ್ಯಮಗಳಿಗೆ ಮರುವಿಮೆ ಬೆಂಬಲವನ್ನು ಒದಗಿಸುವಂತೆ ರಷ್ಯಾ ಈಗಾಗಲೇ ತನ್ನ ರಾಷ್ಟ್ರೀಯ ಮರುವಿಮೆ ಕಂಪನಿಗೆ ಸೂಚಿಸಿದೆ ಎಂದು ಜಿಐಸಿ ಆರ್ಇ ಅಧಿಕಾರಿಯೋರ್ವರು ತಿಳಿಸಿದರು.
ಜಿಐಸಿ ಆರ್ಇ ತನ್ನ ಮುಂಬೈ ಕೇಂದ್ರ ಕಚೇರಿಯಿಂದ ರಷ್ಯದ ಸರಕಾರಿ ಮತ್ತು ರಷ್ಯನ್ ಒಕ್ಕೂಟದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಎರೋಫ್ಲೋಟ್ ನ ವಿಮೆ ವ್ಯವಹಾರವನ್ನು ನಿರ್ವಹಿಸುತ್ತಿದ್ದರೆ ಮಾಸ್ಕೋದಲ್ಲಿರುವ ಅದರ ಅಂಗಸಂಸ್ಥೆಯು ಹೆಚ್ಚಿನ ರಷ್ಯನ್ ಉದ್ಯಮಗಳ ವಿಮೆ ವ್ಯವಹಾರಗಳನ್ನು ನಿರ್ವಹಿಸುತ್ತಿದೆ.
ಕ್ರೆಡಿಟ್ ರಿಸ್ಕ್ ಇನ್ಶೂರನ್ಸ್ ಮತ್ತು ರಫ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ಇಸಿಜಿಸಿ ಲಿ.ತನ್ನ ಅಂಡರ್ರೈಟಿಂಗ್ ನೀತಿಯಂತೆ ರಷ್ಯದ ಕಂಟ್ರಿ ರಿಸ್ಕ್ ರೇಟಿಂಗ್ನ್ನು ಪುನರ್ಪರಿಶೀಲಿಸಿದೆ ಮತ್ತು ಫೆ.25ರಿಂದ ರಷ್ಯದ ಮುಕ್ತ ವಿಮೆ ರಕ್ಷಣೆಯನ್ನು ನಿರ್ಬಂಧಿತ ವಿಮೆ ರಕ್ಷಣೆ ವರ್ಗಕ್ಕೆ ಪರಿಷ್ಕರಿಸಿದೆ. ಅದು ಈಗಾಗಲೇ ಉಕ್ರೇನ್ ನ್ನು ತನ್ನ ನಿರ್ಬಂಧಿತ ವರ್ಗದಲ್ಲಿರಿಸಿದೆ.







