ಆರೈಕೆ ಕೇಂದ್ರದಿಂದ ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿ: ಹೈಕೋರ್ಟ್

ಬೆಂಗಳೂರು, ಮಾ.10: ಸರಕಾರಿ ಮಕ್ಕಳ ಆರೈಕೆ ಕೇಂದ್ರಗಳಲ್ಲಿರುವ ಮಕ್ಕಳು ತಪ್ಪಿಸಿಕೊಂಡು ಹೋಗದಿರಲು ಕೈಗೊಂಡಿರುವ ಕ್ರಮಗಳ ಮಾಹಿತಿ ಒದಗಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಸರಕಾರದ ಪರ ವಾದಿಸಿದ ವಕೀಲರು, ಬಾಲಮಂದಿರಗಳಿಂದ ಮಕ್ಕಳು ನಾಪತ್ತೆಯಾಗಿರುವ ವಿಚಾರವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಾಹಿತಿ ಕೇಳಲಾಗಿದೆ. ಈ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಲು 2 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅಲ್ಲದೇ, ಮಕ್ಕಳು ಕಾಣೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿವರವಾದ ವರದಿ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 29ಕ್ಕೆ ಮುಂದೂಡಿತು.
2015-16ರಿಂದ 2021ರ ಅಕ್ಟೋಬರ್ ನಡುವೆ ರಾಜ್ಯದ ವಿವಿಧ ಸರಕಾರಿ ಬಾಲಮಂದಿರಗಳಿಂದ ಒಟ್ಟು 420 ಮಕ್ಕಳು ಕಾಣೆಯಾಗಿದ್ದಾರೆ. ಈ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಾಗಿವೆ. ಆದರೆ, ಇವರಲ್ಲಿ 141 ಮಕ್ಕಳು ಈವರೆಗೆ ಪತ್ತೆಯಾಗಿಲ್ಲ.ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಲ್ಲದೇ, ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚುವಂತೆ ಹಾಗೂ ಮಕ್ಕಳ ನಾಪತ್ತೆ ಪ್ರಕರಣಗಳ ತನಿಖೆಗೆ ಬಾಲ ನ್ಯಾಯ ಕಾಯ್ದೆಯ ಅನುಸಾರ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪೊಲೀಸ್ ಘಟಕ ಸ್ಥಾಪಿಸುವುದು ಸೇರಿದಂತೆ ಸರಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.







