ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆ ವರದಿಯಾಗಿದ್ದಕ್ಕಿಂತ ಎಂಟು ಪಟ್ಟು ಅಧಿಕ: ಲ್ಯಾನ್ಸೆಟ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ವಾಸ್ತವವಾಗಿ ವರದಿಯಾದ ಸಂಖ್ಯೆಗಿಂತ ಎಂಟು ಪಟ್ಟು ಅಧಿಕ ಎಂಬ ಆತಂಕಕಾರಿ ಅಂಶವನ್ನು ಲ್ಯಾನ್ಸೆಟ್ ಅಧ್ಯಯನ ವರದಿ ಬಹಿರಂಗಪಡಿಸಿದೆ.
2021ರ ವೇಳೆಗೆ ಭಾರತದಲ್ಲಿ ಒಟ್ಟು 40.7 ಲಕ್ಷ ಹೆಚ್ಚುವರಿ ಕೋವಿಡ್ ಸಾವು ಸಂಭವಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕ ಎಂದು ವರದಿಯಲ್ಲಿ ಹೇಳಲಾಗಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುವರಿ ಕೋವಿಡ್ ಸಾವು ಸಂಭವಿಸಿದ ಬಗ್ಗೆ ಇದು ಮೊಟ್ಟಮೊದಲ ತಜ್ಞರ ಅಂದಾಜು ಆಗಿದ್ದು, 2021ರ ಡಿಸೆಂಬರ್ ಕೊನೆವರೆಗೆ ವಿಶ್ವಾದ್ಯಂತ 1.82 ಕೋಟಿ ಮಂದಿ ಈ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಇದು ಅಧಿಕೃತ ದಾಖಲೆಯಲ್ಲಿ ಇರುವ 59 ಲಕ್ಷ ಮಂದಿಗೆ ಹೋಲಿಸಿದರೆ ಮೂರು ಪಟ್ಟು ಅಧಿಕ. ಬಿಲ್ ಆ್ಯಂಡ್ ಮಿಲಿಂದಾ ಗೇಟ್ಸ್ ಫೌಂಡೇಷನ್ ನೆರವಿನ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, "2020ರ ಜನವರಿ 1ರಿಂದ 2021ರ ಡಿಸೆಂಬರ್ 31ರವರೆಗೆ ಅಧಿಕೃತವಾಗಿ ಸೋಂಕಿನಿಂದ 59 ಲಕ್ಷ ಮಂದಿ ಮೃತಪಟ್ಟಿದ್ದು, ಆದರೆ ವಿಶ್ವಾದ್ಯಂತ 1.82 ಕೋಟಿ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭಾರತದಲ್ಲಿ ವರದಿಯಾಗದೇ ಇರುವ ಸಾವಿನ ಸಂಖ್ಯೆ ಅತ್ಯಧಿಕವಾಗಿದ್ದು, 40.7 ಲಕ್ಷ ಎಂದು ಅಂದಾಜಿಸಲಾಗಿದೆ. ಅಮೆರಿಕದಲ್ಲಿ 11.3 ಲಕ್ಷ ಮತ್ತು ರಷ್ಯಾದಲ್ಲಿ 10.7 ಲಕ್ಷ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಲಾಗಿದೆ.
ಅಧ್ಯಯನ ಅವಧಿಯಲ್ಲಿ ಅಧಿಕೃತವಾಗಿ ಭಾರತದಲ್ಲಿ ಸೋಂಕಿಗೆ ಬಲಿಯಾದವರು 4.89 ಲಕ್ಷ ಮಂದಿ. ಪ್ರತಿ ಒಂದು ಲಕ್ಷ ಮಂದಿಯ ಪೈಕಿ 18.3 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ವಾಸ್ತವವಾಗಿ ಹೆಚ್ಚುವರಿ ಸಾವಿನ ಸಂಖ್ಯೆ ಎಂಟು ಪಟ್ಟು ಅಧಿಕವಾಗಿದ್ದು, 40.7 ಲಕ್ಷ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಹೆಚ್ಚುವರಿ ಸಾವಿನ ಸಂಖ್ಯೆಯನ್ನು ಪರಿಗಣಿಸಿದರೆ ಲಕ್ಷಕ್ಕೆ 152.5 ಮಂದಿ ಮೃತಪಟ್ಟಿದ್ದಾರೆ. ಇಡೀ ವಿಶ್ವದಲ್ಲಿ ಸಂಭವಿಸಿರುವ ಹೆಚ್ಚುವರಿ ಸಾವಿನಲ್ಲಿ ಭಾರತದ ಪಾಲು ಶೇಕಡ 22.3ರಷ್ಟಿದೆ ಎಂದು ವರದಿ ಹೇಳಿದೆ.







