ಉತ್ತರ ಪ್ರದೇಶ: ಬಿಜೆಪಿ ಭರ್ಜರಿ ಜಯದ ನಡುವೆ ಡಿಸಿಎಂಗೆ ಸೋಲು

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವ ನಡುವೆಯೇ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಸಿರತು ಕ್ಷೇತ್ರದಲ್ಲಿ ಸೋಲಿನ ರುಚಿ ಕಂಡಿದ್ದಾರೆ.
ಸಮಾಜವಾದಿ ಪಕ್ಷದ ಮಿತ್ರಪಕ್ಷವಾದ ಅಪ್ನಾ ದಳ (ಕಮರವಾಡಿ)ದ ಪಲ್ಲವಿ ಪಟೇಲ್ ಅವರು ಈ ಕ್ಷೇತ್ರದಲ್ಲಿ 6,832 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಮೌರ್ಯ ಈ ಕ್ಷೇತ್ರದಲ್ಲಿ ಹೈವೋಲ್ಟೇಜ್ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪಲ್ಲವಿ ಪಟೇಲ್ ಅವರ ಸಹೋದರಿ ಅನುಪ್ರಿಯಾ ಪಟೇಲ್ ಕೂಡಾ ಮೌರ್ಯ ಪರ ಪ್ರಚಾರ ಕೈಗೊಂಡಿದ್ದರು. ಆದರೆ ಇದ್ಯಾವುದೂ ಡಿಸಿಎಂ ಅವರನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಅಪ್ನಾದಳ (ಸೋನೆವಾಲ್) ಮುಖ್ಯಸ್ಥೆಯಾದ ಅನುಪ್ರಿಯಾ ಪಟೇಲ್ ಹಲವು ವರ್ಷಗಳಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಕಮೇರವಾಡಿ ಬಣ ಮಾತ್ರ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ. ವಾರಣಾಸಿ- ಮಿರ್ಜಾಪುರ ಪ್ರದೇಶದಿಂದ ಕೇಂದ್ರ ಉತ್ತರ ಪ್ರದೇಶದ ಬುಂಡೇಲ್ ಖಂಡ ಜಿಲ್ಲೆಗಳ ವರೆಗೂ ಅಪ್ನಾದಳದ ನೆಲೆ ಹಬ್ಬಿಕೊಂಡಿದೆ. ಸಿರತು ಕ್ಷೇತ್ರ ಪೂರ್ವ ಉತ್ತರ ಪ್ರದೇಶದ ಕೌಶಂಭಿ ಜಿಲ್ಲೆಯಲ್ಲಿದ್ದು, ಇದು ಅಪ್ನಾದಳದ ಬಹುದೊಡ್ಡ ನೆಲೆಯಾಗಿದೆ.
ಸಮಾಜವಾದಿ ಪಕ್ಷ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೇ ತೃಪ್ತಿಪಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಮತ್ತು ಮಾಯಾವತಿಯವರ ಬಹುಜನ ಸಮಾಜ ಪಕ್ಷ ಒಂದಂಕಿಯೊಂದಿಗೆ ನಾಮಾವಶೇಷವಾಗಿವೆ.







