ಪಂಜಾಬ್ ಮುಖ್ಯಮಂತ್ರಿ ಚನ್ನಿಗೆ ಸೋಲುಣಿಸಿದ ಮೊಬೈಲ್ ರಿಪೇರಿ ಅಂಗಡಿ ಮಾಲಿಕ ಲಾಭ್ ಸಿಂಗ್

ಹೊಸದಿಲ್ಲಿ: ಪಂಜಾಬ್ ಬದೌರ್ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬರ್ನಾಲಾ ಜಿಲ್ಲೆಯ ಉಗೋಕೆ ಗ್ರಾಮದ ಹಳ್ಳಿಯ ಮೊಬೈಲ್ ರಿಪೇರಿ ಅಂಗಡಿಯ ಮಾಲಿಕ ಲಾಭ್ ಸಿಂಗ್ ಅವರು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿಅವರನ್ನು ಮಣಿಸಿ ದೈತ್ಯ ಸಂಹಾರಿಯಾಗಿ ಹೊರಹೊಮ್ಮಿದ್ದಾರೆ.
ಚನ್ನಿ ಅವರು ಚಮ್ಕೌರ್ ಸಾಹಿಬ್ ಹೊರತುಪಡಿಸಿ ಭದೌರ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು
ಮೀಸಲು ಕ್ಷೇತ್ರವಾದ ಭದೌರ್ ಅನ್ನು 2017 ರಲ್ಲಿ ಎಎಪಿ ಗೆದ್ದಿತ್ತು.
ತಳಮಟ್ಟದಲ್ಲಿ ಕಠಿಣ ಶ್ರಮ ಪಟ್ಟಿರುವ ಲಾಭ್ ಸಿಂಗ್ ಗೆ ಈಗ ತಕ್ಕ ಫಲ ಲಭಿಸಿದೆ. 12 ನೇ ತರಗತಿಯವರೆಗೆ ಓದಿರುವ 35 ವರ್ಷ ವಯಸ್ಸಿನ ಲಾಭ್ ಸಿಂಗ್ ಮೊಬೈಲ್ ರಿಪೇರಿ ಮಾಡಲು ಕಲಿತ ಬಳಿಕ ಅಂಗಡಿ ತೆರೆದಿದ್ದರು. ಎಎಪಿಗೆ ಪೂರ್ಣಾವಧಿ ಕಾರ್ಯಕರ್ತನಾಗಿ ಸೇರಿದ ನಂತರ, ಅವರು ಹಲ್ಕಾ ಉಸ್ತುವಾರಿಯಿಂದ ಬ್ಲಾಕ್ ಮತ್ತು ವೃತ್ತದ ಅಧ್ಯಕ್ಷರಾಗಿ ಭಡ್ತಿ ಪಡೆದರು.
ತಾನು ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಿಂಗ್ ಅವರು ಹೀರೋ ಹೋಂಡಾ ಬೈಕನ್ನು ತಮ್ಮ ಆಸ್ತಿ ಎಂದು ನಮೂದಿಸಿದ್ದಾರೆ.
ಚಾಲಕನ ಮಗನಾಗಿರುವ ಲಾಭ್ ಸಿಂಗ್ "ಎಎಪಿಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. 2013 ರಲ್ಲಿ ಪಕ್ಷವು ಪಂಜಾಬ್‌ಗೆ ಬಂದಾಗಿನಿಂದ ನಾನು ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ’’ ಎಂದು ಹೇಳಿದರು.
"ತನ್ನ ಕುಟುಂಬದೊಂದಿಗೆ ಎರಡು ಕೋಣೆಗಳ ಮನೆಯಲ್ಲಿ ವಾಸಿಸುವ ಈ ಯುವಕ ಲಾಭ್ ಸಿಂಗ್, ಸಿಎಂ ಅನ್ನು ಸೋಲಿಸಿದ್ದಾನೆ’’ ಎಂದು ಎಎಪಿಯ ಹಿರಿಯ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ಅವರು ಹೇಳಿದ್ದಾರೆ.







