ಬಿಜೆಪಿಯ ಭರ್ಜರಿ ಗೆಲುವಿನ ಮರುದಿನ ಗುಜರಾತ್ ನಲ್ಲಿ ಪ್ರಧಾನಿ ಭರ್ಜರಿ ರೋಡ್ ಶೋ

ಗಾಂಧಿನಗರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿ ಮೂರು ರಾಜ್ಯಗಳಲ್ಲಿ ಅಧಿಕಾರವನ್ನು ಉಳಿಸಿಕೊಂಡಿರುವ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಂದಿನ ಚುನಾವಣೆಯ ರಾಜ್ಯವಾದ ಗುಜರಾತ್‌ಗೆ ಆಗಮಿಸಿದ್ದು ಅವರಿಗೆ ಭವ್ಯವಾದ ಸ್ವಾಗತ ಕೋರಲಾಗಿದೆ.
ಹಲವಾರು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎರಡು ದಿನಗಳ ಭೇಟಿಗಾಗಿ ಪ್ರಧಾನಿ ತಮ್ಮ ತವರು ರಾಜ್ಯಕ್ಕೆ ಬಂದಿದ್ದಾರೆ. ಅವರು ಇಂದು ಸಂಜೆ ಗುಜರಾತ್ ಪಂಚಾಯತ್ ಮಹಾಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಹೂವಿನ ಹಾರಗಳಿಂದ ಅಲಂಕರಿಸಲ್ಪಟ್ಟ ತೆರೆದ ಜೀಪ್‌ನಲ್ಲಿ ಸವಾರಿ ಮಾಡಿದ ಪ್ರಧಾನಿ ಮೋದಿ, ವಿಮಾನ ನಿಲ್ದಾಣದಿಂದ ಗಾಂಧಿನಗರದಲ್ಲಿರುವ ಬಿಜೆಪಿಯ ರಾಜ್ಯ ಕೇಂದ್ರ ಕಚೇರಿಯಾದ ಕಮಲಂವರೆಗೆ ಸುಮಾರು 10 ಕಿ.ಮೀ. ದೂರದ ತನಕ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆಬದಿಯಲ್ಲಿ ನೆರೆದಿದ್ದ ನೂರಾರು ಬೆಂಬಲಿಗರು ಮತ್ತು ಅಭಿಮಾನಿಗಳತ್ತ ಕೈ ಬೀಸಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರು ವಾಹನದಲ್ಲಿ ಪ್ರಧಾನಿ ಮೋದಿಯವರ ಪಕ್ಕದಲ್ಲಿದ್ದರು.
ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಆದರೆ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.







