"ನಮ್ಮೊಂದಿಗೆ ವಿಲೀನವಾಗುವ ಸಮಯ ಬಂದಿದೆ": ಕಾಂಗ್ರೆಸ್ ಸೋಲಿನ ಬಳಿಕ ಟಿಎಂಸಿ ಹೇಳಿಕೆ

ಕೋಲ್ಕತಾ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತೊಮ್ಮೆ ಕಾಂಗ್ರೆಸ್ ಅನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಅನ್ನು ಟಿಎಂಸಿಯೊಂದಿಗೆ ವಿಲೀನಗೊಳಿಸಬೇಕು. ಟಿಎಂಸಿ ಅಧ್ಯಕ್ಷೆ, ಬಿಜೆಪಿಯನ್ನು ಸೋಲಿಸುವ ಏಕೈಕ ವ್ಯಕ್ತಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೈಜೋಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಟಿಎಂಸಿ ನಾಯಕರು ಕರೆ ನೀಡಿದರು.
ಟಿಎಂಸಿ ನಾಯಕ ಹಾಗೂ ರಾಜ್ಯ ಸಾರಿಗೆ ಮತ್ತು ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಮಾತನಾಡಿ, “ಕಾಂಗ್ರೆಸ್‌ನಂತಹ ಹಳೆಯ ಪಕ್ಷ ಏಕೆ ಕಣ್ಮರೆಯಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಕೂಡ ಈ ಪಕ್ಷದ ಭಾಗವಾಗಿದ್ದೆವು. ಕಾಂಗ್ರೆಸ್, ಟಿಎಂಸಿ ಜೊತೆ ವಿಲೀನವಾಗಬೇಕು. ಇದೇ ಸರಿಯಾದ ಸಮಯ. ನಂತರ ರಾಷ್ಟ್ರಮಟ್ಟದಲ್ಲಿ ಮಹಾತ್ಮ ಗಾಂಧಿ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ತತ್ವಗಳ ಮೇಲೆ ನಾವು (ನಾಥೂರಾಂ) ಗೋಡ್ಸೆಯ ತತ್ವಗಳ ವಿರುದ್ಧ ಹೋರಾಡಬಹುದು’’ ಎಂದರು.
ಟಿಎಂಸಿಯ ವಕ್ತಾರ ಕುನಾಲ್ ಘೋಷ್ ಕೂಡ ಹಕೀಮ್ ಹೇಳಿಕೆಗೆ ಧ್ವನಿಗೂಡಿಸಿದರು.
"ಬಿಜೆಪಿಯಂತಹ ಶಕ್ತಿ ವಿರುದ್ಧ ಕಾಂಗ್ರೆಸ್ ಗೆ ಹೋರಾಡಲು ಸಾಧ್ಯವಿಲ್ಲ ಎಂದು ನಾವು ಬಹಳ ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ಬಿಜೆಪಿ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿಯಂತಹ ನಾಯಕಿ ಬೇಕು. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು’’ ಎಂದರು.
ಇದೇ ವೇಳೆ, ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಟಿಎಂಸಿಯ ಪ್ರಸ್ತಾಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
“ಟಿಎಂಸಿ ಬಿಜೆಪಿಯ ದೊಡ್ಡ ಏಜೆಂಟ್. ಅದು ಬಿಜೆಪಿ ವಿರುದ್ಧ ಹೋರಾಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರೆ, ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲಿ’’ಎಂದರು.







