ಬಿಜೆಪಿ ಗೆಲುವಿನ ಬೆನ್ನಲ್ಲೇ ಲಖಿಂಪುರ ಖೇರಿ ರೈತರ ಕೊಲೆ ಪ್ರಕರಣದ 'ಪ್ರಮುಖ ಸಾಕ್ಷಿ'ಯ ಮೇಲೆ ದಾಳಿ: ವರದಿ

photo pti
ಹೊಸದಿಲ್ಲಿ: ಲಖೀಂಪುರ ಖೇರಿ ಪ್ರಕರಣದ ಮುಖ್ಯ ಸಾಕ್ಷಿಯ ಮೇಲೆ ನಿನ್ನೆ ರಾತ್ರಿ ದಾಳಿ ನಡೆದಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಲಖಿಂಪುರ-ಖೇರಿ ಪ್ರಕರಣದ ಪ್ರಧಾನ ಆರೋಪಿ ಆಶಿಶ್ ಮಿಶ್ರಾ ಅವರಿಗೆ ನೀಡಲಾದ ಜಾಮೀನಿನ ವಿರುದ್ಧದ ಮನವಿಯ ವಿಚಾರಣೆಯನ್ನು ಸಿಜೆಐ ರಮಣ ಅವರು ಮಾರ್ಚ್ 15 ಕ್ಕೆ ಮುಂದೂಡುವ ಮೊದಲು ಭೂಷಣ್ ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಟ್ವಿಟರಿನಲ್ಲಿ ಹರಿದಾಡುತ್ತಿರುವ ವಿಡಿಯೋ ಹಾಗೂ ವರದಿಗಳ ಪ್ರಕಾರ, ಪ್ರಕರಣದ ಮುಖ್ಯ ಸಾಕ್ಷಿ ದಿವ್ಜೋತ್ ಸಿಂಗ್ ಮೇಲೆ ಉತ್ತರಪ್ರದೇಶದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ಬಿಜೆಪಿ ಬೆಂಬಲಿಗರು ಗುರುವಾರ ರಾತ್ರಿ ದಾಳಿ ಮಾಡಿದ್ದಾರೆ.
ಸಿಂಗ್ ಅವರನ್ನು ಬಿಜೆಪಿ ಕಾರ್ಯಕರ್ತರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಆರೋಪಿಸಿರುವ ಟ್ವೀಟ್ ಒಂದಕ್ಕೆ ಖೇರಿ ಪೊಲೀಸರ ಟ್ವಿಟರ್ ಹ್ಯಾಂಡಲ್ ಪ್ರತಿಕ್ರಿಯಿಸಿದ್ದು, ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ದಾಳಿಕೋರರ ವಿರುದ್ಧ ಐಪಿಸಿ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕ್ವಿಂಟ್ ದೃಢಪಡಿಸಿದೆ. ವಿಚಾರಣೆ ನಡೆಯುತ್ತಿದೆ ಎಂದು ಖೇರಿ ಪೊಲೀಸ್ ಮೂಲಗಳು ದಿ ಕ್ವಿಂಟ್ಗೆ ತಿಳಿಸಿವೆ.
ಅದಾಗ್ಯೂ, ಶುಕ್ರವಾರ ಬೆಳಗಿನ ಜಾವದವರೆಗೆ, ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
2021 ರ ಅಕ್ಟೋಬರ್ 3 ರಂದು ಉತ್ತರಪ್ರದೇಶದ ಲಖಿಂಪುರ ಖೇರಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಪುತ್ರನ ಬೆಂಗಾವಲು ಕಾರು ಹರಿಸಲಾಗಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರು ಕಾರಿನಡಿಗೆ ಸಿಲುಕಿ ಸಾವನ್ನಪ್ಪಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಹೊರಿಸಲಾಗಿತ್ತು.
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆ ರೈತ ಹೋರಾಟಗಾರರ ತೀವ್ರ ಆಕ್ರೋಶ ಹುಟ್ಟು ಹಾಕಿತ್ತು. ಅದಾಗ್ಯೂ, ಲಖಿಂಪುರ ಖೇರಿಯ ಎಲ್ಲಾ ಎಂಟು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದರ ವಿಜಯೋತ್ಸವದ ವೇಳೆ ಪ್ರಕರಣದ ಸಾಕ್ಷಿಯ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.







