ಮಂಗಳೂರು: 'ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ'ದ ಸಮಾರೋಪ ಸಮಾರಂಭ

ಮಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಟೆಕ್ನಿಕಲ್ ಕನ್ಸಲ್ಟೆನ್ಸಿ ಸರ್ವಿಸಸ್ ಆರ್ಗನೈಸೇಷನ್ ಆಫ್ ಕರ್ನಾಟಕ (TECSOK), ಬೆಂಗಳೂರು, ಲಯನ್ಸ್ ಕ್ಲಬ್, ಕದ್ರಿ, ಮಲ್ಲಿಕಟ್ಟೆ, ಮಂಗಳೂರು, ಸಹಕಾರಿ ಭಾರತಿ ಮಂಗಳೂರು, ಸರಕಾರಿ ಮಹಿಳಾ ಐ ಟಿ ಐ, ಮಂಗಳೂರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ “ಹತ್ತು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ”ದ ಸಮಾರೋಪ ಸಮಾರಂಭವು ಸರಕಾರಿ ಮಹಿಳಾ ಐಟಿಐ, ಶರಬತ್‍ಕಟ್ಟೆ, ಯೆಯ್ಯಾಡಿಯಲ್ಲಿ ಇತ್ತೀಚಿಗೆ ಜರುಗಿತು.
ಸಿಡಾಕ್‍ನ ಜಂಟಿ ನಿರ್ದೇಶಕರಾದ ಅರವಿಂದ ಡಿ ಬಾಳೇರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮಲ್ಲಿರುವ ಕೌಶಲ್ಯವನ್ನು ಹೊರಹೊಮ್ಮಿಸಿ ತಮ್ಮ ವೈಯಕ್ತಿಕ ಮತ್ತು ದೇಶದ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಆದರ್ಶ ಉದ್ಯಮಿಗಳಾಗಿ ಬೆಳೆದು ಬರಬೇಕೆಂದು ತಿಳಿಸಿದರು.
ಲಯನ್ಸ್ ಕ್ಲಬ್, ಕದ್ರಿ ಮಂಗಳೂರು ಇದರ ಅಧ್ಯಕ್ಷರಾದ ಸತೀಶ್ ರೈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇವರು ಆತ್ಮ ನಿರ್ಭರತೆಯಿಂದ ಕಾರ್ಯನಿರ್ವಹಿಸಿ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬನೆಗೆ ಶ್ರಮಿಸಿ ಸರಕಾರದಿಂದ ಸೂಕ್ಷ್ಮ, ಸಣ್ಣ ಹಾಗೂ ಜೀವನೋಪಾಯ ಉದ್ದಿಮೆಗಳಿಗೆ ದೊರೆಯುವ ಧನಸಹಾಯ ಸದುಪಯೋಗವನ್ನು ತಮ್ಮದನ್ನಾಗಿಸಿಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಶ್ರೀ ಗಣೇಶ್ ಶೆಣೈ, ಅಧ್ಯಕ್ಷರು, ಸಹಕಾರ ಭಾರತಿ, ಮಹಾನಗರ ಪಾಲಿಕೆ ಮಂಗಳೂರು, ಮೋಹನಾಂಗಯ್ಯ ಸ್ವಾಮಿ, ಅಧ್ಯಕ್ಷರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನೋದ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ದರ್ಶನ್ ವಂದನಾರ್ಪಣೆಗೈದರು. ಸಿಡಾಕ್‍ನ ತರಬೇತುದಾರೆ ಕುಮಾರಿ ಪ್ರವಿಷ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕೇಂದ್ರಗಳಿಂದ ಆಗಮಿಸಿದ 30 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದ ಫಲಾನುಭವವನ್ನು ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ 30 ಮಂದಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು ಎಂದು ಜಂಟಿ ನಿರ್ದೇಶಕರಾದ ಸಿಡಾಕ್ ಅವರು ತಿಳಿಸಿದ್ದಾರೆ.