ಮೇಕೆದಾಟು ಪಾದಯಾತ್ರೆ ವೇಳೆ ಮಾಜಿ ಶಾಸಕ ಬಿ.ಆರ್.ಪಾಟೀಲ್‍ಗೆ ಅವಮಾನ: ಕ್ಷಮೆಯಾಚಿಸಿ ಪತ್ರ ಬರೆದ ಡಿ.ಕೆ.ಶಿವಕುಮಾರ್

ಕಲಬುರಗಿ, ಮಾ.11: ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅವರನ್ಮು ತಳ್ಳಿ ಅವಮಾನ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಅನುಚಿತ ವರ್ತನೆಗೆ ಆಕ್ರೋಶಗೊಂಡ ಬಿ.ಆರ್.ಪಾಟೀಲ್ ಹಾಗೂ ಅವರ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದರು. ನನ್ನ ಜೀವನದಲ್ಲಿ ಯಾವತ್ತು ಇಂಥ ಘಟನೆ ನಡೆದಿರಲಿಲ್ಲ. ಇಂಥ ವರ್ತನೆಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆತ್ಮಗೌರವ ಇದ್ದವರು ಯಾರೂ ಇದನ್ನು ಸಹಿಸುವುದಿಲ್ಲ. ನಾನು ಇದನ್ನು ಖಂಡಿಸುತ್ತೇನೆ ಎಂದು ಡಿಕೆಶಿ ವಿರುದ್ಧ ಬಿ.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಬಿ.ಆರ್.ಪಾಟೀಲ್ ಅವರಿಗೆ ಪತ್ರ ಬರೆದಿರುವ ಡಿಕೆಶಿ ಅವರು, ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ನಾನು ತಮ್ಮನ್ನು ತಳ್ಳಿ ಅವಮಾನ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನನಗೆ ತುಂಬಾ ಖೇದ ಉಂಟುಮಾಡಿದೆ. ತಮ್ಮಂತಹ ಹಿರಿಯರ ಜೊತೆ ಈ ರೀತಿ ಅನುಚಿತವಾಗಿ ನಡೆದುಕೊಳ್ಳುವುದನ್ನು ನಾನು ಕನಸು-ಮನಸಿನಲ್ಲಿಯೂ ಎಣಿಸಿಕೊಳ್ಳಲು ಸಾಧ್ಯವಿಲ್ಲ. ಈ ಘಟನೆ ನನಗೆ ಅರಿವಿಲ್ಲದೇ ನಡೆದಿದೆ. ಜನರ ನೂಕುನುಗ್ಗಲಿನಲ್ಲಿ ಅಚಾತುರ್ಯ ನಡೆದಿದ್ದರೆ ನಾನು ವಿಷಾಧಿಸುತ್ತೇನೆ ಎಂದಿದ್ದಾರೆ.
ನಾನು ಪಕ್ಷದ ಆದೇಶದಂತೆ ಗೋವಾದಲ್ಲಿರುವೆ. ಇಲ್ಲಿಂದ ವಾಪಸ್ ಆದ ತಕ್ಷಣ ತಮ್ಮನ್ನ ಭೇಟಿಯಾಗುವೆ. ದಯವಿಟ್ಟು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಕ್ಷಕ್ಕೆ ಹಾನಿಯ ಮನವರಿಕೆ: ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಶಿವಕುಮಾರ್ ಅವರಿಗೆ ಘಟನೆಯಿಂದಾಗಿ ಪಕ್ಷಕ್ಕೆ ಆಗಲಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಖಂಡ್ರೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ ಗಮನಕ್ಕೂ ತಂದಿದ್ದರು. ಹೀಗಾಗಿ, ಹೈಕಮಾಂಡ್ ಸೂಚನೆ ಮೇರೆಗೆ ಶಿವಕುಮಾರ್ ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.







