ಉಕ್ರೇನ್ ಬಿಕ್ಕಟ್ಟಿನಿಂದ ಹೆಚ್ಚುತ್ತಿರುವ ಇಂಧನ ವೆಚ್ಚದಿಂದಾಗಿ ಭಾರತದ ಆರ್ಥಿಕತೆಗೆ ಹಾನಿಯಾಗಲಿದೆ: ಐಎಂಎಫ್
"ಆಹಾರದ ಬೆಲೆಯ ಮೇಲೆಯೂ ಈ ಬಿಕ್ಕಟ್ಟು ತೀವ್ರ ಪರಿಣಾಮ ಬೀರಲಿದೆ"

ವಾಷಿಂಗ್ಟನ್, ಮಾ.11: ಇಂಧನ ಬೆಲೆಯೇರಿಕೆಯು ಭಾರತದ ಅರ್ಥವ್ಯವಸ್ಥೆಗೆ ಹಾನಿಯುಂಟು ಮಾಡಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ತಲಿನಾ ಜಾರ್ಜಿಯೆವಾ ಹೇಳಿದ್ದಾರೆ. ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ವಾಷಿಂಗ್ಟನ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಲೆಯೇರಿಕೆಯ ಬಿಸಿಯಿಂದ ಅತ್ಯಂತ ದುರ್ಬಲ ವರ್ಗದವರನ್ನು ರಕ್ಷಿಸಲು ಎಲ್ಲಾ ದೇಶಗಳೂ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇವಲ ಇಂಧನದ ಬೆಲೆ ಮಾತ್ರವಲ್ಲ, ಆಹಾರದ ಬೆಲೆಯ ಮೇಲೆಯೂ ಈ ಬಿಕ್ಕಟ್ಟು ತೀವ್ರ ಪರಿಣಾಮ ಬೀರಲಿದೆ ಎಂದರು.
ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದ ಬಳಿಕ ತೈಲದ ದರ 14 ವರ್ಷಗಳಲ್ಲೇ ಅತ್ಯಧಿಕ ಮಟ್ಟ ತಲುಪಿದೆ. ಭಾರತವು ತನ್ನ ತೈಲಬೇಡಿಕೆಯಲ್ಲಿ 85%ದಷ್ಟನ್ನು ಆಮದು ಮಾಡಿಕೊಳ್ಳುವ ಕಾರಣ ತೈಲ ದರ ಏರಿಕೆ ಭಾರತಕ್ಕೆ ಅತ್ಯಂತ ಹಾನಿಕರವಾಗಲಿದೆ. ಬ್ರೆಂಟ್ ಕಚ್ಛಾತೈಲದ ದರ ಶುಕ್ರವಾರ ಪ್ರತೀ ಬ್ಯಾರಲ್ಗೆ 112.63 ಡಾಲರ್ಗೆ ತಲುಪಿದೆ.
ಭಾರತದಲ್ಲಿ ಹಣದುಬ್ಬರ ಪ್ರಮಾಣ ಸುಮಾರು 6%ರಷ್ಟಿದೆ. ಭಾರತ ಆಮದು ತೈಲವನ್ನೇ ಅಧಿಕವಾಗಿ ಅವಲಂಬಿಸಿರುವುದರಿಂದ ತೈಲ ದರ ಏರಿಕೆಯು ಕುಟುಂಬದ ಖರೀದಿಯ ಶಕ್ತಿಯನ್ನು ಗಣನೀಯವಾಗಿ ಕುಗ್ಗಿಸಲಿದೆ ಎಂದು ಸುದ್ಧಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಐಎಂಎಫ್ನ ಪ್ರಥಮ ಉಪ ಪ್ರಧಾನ ನಿರ್ದೇಶಕಿ ಗೀತಾ ಗೋಪೀನಾಥ್ ಹೇಳಿದ್ದಾರೆ. ಭಾರತದ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರ ದರವನ್ನು 2%ದಿಂದ 6% ಪ್ರಮಾಣದಲ್ಲಿ ಉಳಿಸಿಕೊಳ್ಳುವ ಉದ್ದೇಶ ಹೊಂದಿದೆ. ಆದರೆ ಹಣದುಬ್ಬರ ದರ ಏರಿಕೆಯಾಗಿರುವುದು ದೇಶದ ಆರ್ಥಿಕ ಕಾರ್ಯನೀತಿಗೆ ಎದುರಾದ ಸವಾಲಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.







