ಕ್ಯಾಂಪ್ಕೋ ಸಂಸ್ಥೆಗೆ ವಂಚನೆ ಪ್ರಕರಣ: ಆರೋಪಿಗೆ ಪೊಲೀಸ್ ಕಸ್ಟಡಿ

ಪುತ್ತೂರು: ಪುತ್ತೂರಿನ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಬೀಜ ಸರಬರಾಜು ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಆರೋಪದಲ್ಲಿ ಮುಂಬೈಯಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಕರೆತಂದು ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಕೋರಿಕೆಯಂತೆ ನ್ಯಾಯಾಲಯ ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಬೀಜ ಸರಬರಾಜು ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಶಂಬೂರು ನಿವಾಸಿ ವಿನ್ಸಿ ಪಿಂಟೋ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಮಾ.8ರಂದು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಆತನನ್ನು ಪುತ್ತೂರಿಗೆ ಮಾ. 9ರಂದು ಕರೆತಂದಿದ್ದರು.
ಈ ಸಂದರ್ಭದಲ್ಲಿ ಆತನ ಆರೋಗ್ಯದಲ್ಲಿ ಏರು ಪೇರಾದ ಹಿನ್ನಲೆಯಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಾ.10ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ವಿಚಾರಿಸುವ ನಿಟ್ಟಿನಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಯನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.