ಯುದ್ಧದಲ್ಲಿ ಹೋರಾಡಲು ಸಿರಿಯಾ ಸ್ವಯಂಸೇವಕರ ಬಳಕೆ: ರಶ್ಯ

ಮಾಸ್ಕೊ, ಮಾ.11: ಸಿರಿಯಾ ಮತ್ತು ಮಧ್ಯಪ್ರಾಚ್ಯದ ಹೋರಾಟಗಾರರಿಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ರಶ್ಯದ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಉಕ್ರೇನ್ ವಿರುದ್ಧಧ ಹೋರಾಟದಲ್ಲಿ ರಶ್ಯ ಪರ ಪಾಲ್ಗೊಳ್ಳಲು ಬಯಸುವವರು ಮತ್ತು ಪಾಲ್ಗೊಳ್ಳುವುದಾಗಿ ಹೇಳಿದವರಲ್ಲಿ ಹೆಚ್ಚಿನವರು ಮಧ್ಯಪ್ರಾಚ್ಯ ದೇಶ ಹಾಗೂ ಸಿರಿಯಾದ ಪ್ರಜೆಗಳು ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಸಿರಿಯಾದಲ್ಲಿ 2015ರಿಂದ ಬಂಡುಗೋರರ ವಿರುದ್ಧ ಹೋರಾಡುವ ಸರಕಾರಿ ಪಡೆಗಳಿಗೆ ನೆರವಾಗುವ ದೇಶಗಳಲ್ಲಿ ರಶ್ಯ ಪ್ರಮುಖವಾಗಿದೆ. ಸ್ವಯಂ ಸೇವಕ ಹೋರಾಟಗಾರರನ್ನು ಉಕ್ರೇನ್ ವಿರುದ್ಧದ ಹೋರಾಟಕ್ಕೆ ಬಳಸುವ ಪ್ರಸ್ತಾವ ಸ್ವೀಕಾರಾರ್ಹವಾಗಿದೆ. ಅಮೆರಿಕವು ಉಕ್ರೇನ್ ಪರ ಹೋರಾಡಲು ಬಾಡಿಗೆ ಸಿಪಾಯಿಗಳನ್ನು ಕಳುಹಿಸಿದೆ ಎಂದು ಪೆಸ್ಕೋವ್ ಸಮರ್ಥಿಸಿಕೊಂಡಿದ್ದಾರೆ.
ಪಾಶ್ಚಿಮಾತ್ಯ ದೇಶಗಳು ಬಾಡಿಗೆ ಸಿಪಾಯಿಗಳ ಆಗಮನದ ಬಗ್ಗೆ ಅಷ್ಟೊಂದು ಉತ್ಸುಕರಾಗಿದ್ದರೆ, ನಮ್ಮಲ್ಲೂ ಯುದ್ಧದಲ್ಲಿ ಪಾಲ್ಗೊಳ್ಳಬಯಸುವ ಬಾಡಿಗೆ ಸಿಪಾಯಿಗಳಿದ್ದಾರೆ ಎಂದವರು ಹೇಳಿದ್ದಾರೆ. ವಿದೇಶಿಯರ ಸಹಿತ ಸ್ವಯಂಸೇವಕ ಹೋರಾಟಗಾರರನ್ನು ಉಕ್ರೇನ್ ವಿರುದ್ಧದ ಕದನದಲ್ಲಿ ಬಳಸುವ ಪ್ರಸ್ತಾವನೆಗೆ ಶುಕ್ರವಾರ(ಮಾ.11) ಪುಟಿನ್ ಅನುಮೋದನೆ ನೀಡಿದ್ದಾರೆ. ಸುಮಾರು 16,000 ಸ್ವಯಂಸೇವಕರು (ಇದರಲ್ಲಿ ಹೆಚ್ಚಿನವರು ಮಧ್ಯಪ್ರಾಚ್ಯ ದೇಶಗಳ ಪ್ರಜೆಗಳು) ಯುದ್ಧದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವ ಸೆರ್ಗೈ ಶೊಯಿಗು ಹೇಳಿದ್ದಾರೆ. ರಶ್ಯ ವಿರುದ್ಧದ ಹೋರಾಟಕ್ಕೆ ನೆರವಾಗಬಯಸುವ ವಿದೇಶಿ ಸ್ವಯಂ ಸೇವಕರ ತಂಡವನ್ನು ರಚಿಸುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಇತ್ತೀಚೆಗೆ ಹೇಳಿದ್ದರು.
ಸ್ವಯಂ ಸೇವಕ ಪಡೆ ಪ್ರಸ್ತಾವನೆಗೆ ಪುಟಿನ್ ಅನುಮೋದನೆ
ಉಕ್ರೇನ್ ವಿರುದ್ಧ ರಶ್ಯ ಪಡೆ ನಡೆಸುತ್ತಿರುವ ವಿಶೇಷ ಕಾರ್ಯಾಚರಣೆಯಲ್ಲಿ ರಶ್ಯ ಪರ ಹೋರಾಡಲು ಆಸಕ್ತರಾಗಿರುವ ವಿದೇಶಿ ಸ್ವಯಂ ಸೇವಕರಿಗೆ ಎಲ್ಲಾ ವ್ಯವಸ್ಥೆ ಮಾಡುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಟಿವಿ ವಾಹಿನಿಯ ಮೂಲಕ ನಡೆಸಿದ ಭದ್ರತಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್ ‘ ಪೂರ್ವ ಉಕ್ರೇನ್ನ ಪ್ರತ್ಯೇಕತಾವಾದಿ ಪಡೆಗಳಿಗೆ ನೆರವಾಗಲು ಸ್ವಯಂಸೇವಕರಾಗಿ ಮುಂದೆ ಬರುವವರನ್ನು ಸ್ವಾಗತಿಸಿ, ಯುದ್ಧವಲಯದತ್ತ ತೆರಳಲು ಅವರಿಗೆ ನೆರವಾಗುವುದು ಈಗಿನ ಅಗತ್ಯವಾಗಿದೆ’ ಎಂದರು.
ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ರವಾನಿಸಿದ ಶಸ್ತ್ರಾಸ್ತ್ರಗಳು ರಶ್ಯ ಪಡೆಗಳ ಕೈಸೇರಿದ್ದು ಇವನ್ನು ಪೂರ್ವ ಉಕ್ರೇನ್ನಲ್ಲಿ ಹೋರಾಟ ಮುಂದುವರಿಸಿರುವ ಪ್ರತ್ಯೇಕತಾವಾದಿಗಳ ಡಿಎನ್ಆರ್ ಮತ್ತು ಎಲ್ಎನ್ಆರ್ (ಡೊನೆಟ್ಸ್ಕ್ ಮತ್ತು ಲುಗಾಂಸ್ಕ್ ಪ್ರಾಂತದ ಮೇಲೆ ನಿಯಂತ್ರಣ ಹೊಂದಿರುವ ಪಡೆ) ಸೇನಾ ತುಕಡಿಗಳಿಗೆ ಒದಗಿಸಲಾಗುವುದು. ಅಲ್ಲದೆ ರಶ್ಯದ ಪಶ್ಚಿಮ ಗಡಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೇಟೊ ದೇಶಗಳು ನಡೆಸುತ್ತಿರುವ ಕ್ರಮಗಳ ಹಿನ್ನೆಲೆಯಲ್ಲಿ, ಪಶ್ಚಿಮದ ಗಡಿಯನ್ನು ಇನ್ನಷ್ಟು ಬಲಗೊಳಿಸುವ ಕುರಿತ ವರದಿ ಸಲ್ಲಿಸುವಂತೆ ರಕ್ಷಣಾ ಸಚಿವ ಸೆರ್ಗೈ ಶೊಯಿಗು ಅವರಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.







