ಸಚಿವರು ಒಂದು ನಿಮಿಷವೂ ಮಾತನಾಡುವುದಿಲ್ಲ: ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅಸಮಾಧಾನ

ಬೆಂಗಳೂರು, ಮಾ. 11: ‘ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸಚಿವರ ಬಳಿ ನೂರು ಬಾರಿ ಹೋದರೂ ಅವರು ಒಂದು ನಿಮಿಷವೂ ಮಾತನಾಡುವುದಿಲ್ಲ. ಆಯಿತು, ಮುಂದೆ ನೋಡೋಣ ಎಂದು ನಮ್ಮನ್ನು ವಾಪಸ್ ಕಳುಹಿಸುತ್ತಾರೆ. ಹೀಗಾದರೆ ಅಭಿವೃದ್ಧಿ ಆಗುವುದು ಹೇಗೆ?' ಎಂದು ಆಡಳಿತ ಪಕ್ಷದ ಸದಸ್ಯ ಉಮಾನಾಥ್ ಎ.ಕೋಟ್ಯಾನ್, ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕೋಟ್ಯಾನ್, ಮೂಡಬಿದರೆ ಮೂಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ ಬಜಪೆ ಪಟ್ಟಣ ಪಂಚಾಯ್ತಿಗೆ ಅನುದಾನ ಬಿಡುಗಡೆ ಕುರಿತು ಪ್ರಶ್ನಿಸಿದರು. ಆದರೆ, ಸಚಿವ ನಾಗರಾಜ್ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೋಟ್ಯಾನ್, ಬಜಪೆ ಪಟ್ಟಣ ಪಂಚಾಯ್ತಿಗೆ 40 ಹುದ್ದೆಗಳು ಮಂಜೂರಾಗಿದ್ದು, ಹೊರ ಗುತ್ತಿಗೆ, ಗುತ್ತಿಗೆ ನೌಕರರು ಸೇರಿದಂತೆ 18 ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
‘ಎಂಜಿನಿಯರ್ ಇಲ್ಲದೆ ಕಾಮಗಾರಿಗಳು ನಡೆಯುತ್ತಿಲ್ಲ. ತಾತ್ಕಾಲಿಕವಾಗಿ ಮೂಡಬಿದರೆ ಪುರಸಭೆಯಿಂದ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ಆದರೆ ಅವರು ಅಲ್ಲಿ ಕೆಲಸ ಜಾಸ್ತಿ ಇರುವ ಕಾರಣ ಇಲ್ಲಿಗೆ ಒಂದು ತಿಂಗಳಿಗೊಮ್ಮೆ ಬರುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ. ಕೆಳ ಹಂತದಲ್ಲಿ ಸಿಬ್ಬಂದಿ ಕೊರತೆ ಆದರೆ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಿಸಬೇಕು' ಎಂದು ಆಗ್ರಹಿಸಿದರು.
‘ಸಚಿವರೊಂದಿಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸ್ಪೀಕರ್ ಸೂಚಿಸಿದ್ದಾರೆ. ಆದರೆ, ನಾನೇ ಖುದ್ದು ನೂರು ಬಾರಿ ಹೋದರೂ ಸಚಿವರು ಒಂದು ನಿಮಿಷ ಮಾತನಾಡಲ್ಲ. ನೋಡೋಣ ಎನ್ನುತ್ತಾರೆ ಎಂದು ದೂರಿದರು. ‘ಆಗ ಎದ್ದು ನಿಂತ ಸಚಿವ ಎಂಟಿಬಿ ನಾಗರಾಜು, ‘ನೂರು ಸಲ ಬಂದಿದ್ದೇ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ಒಂದು ಅಥವಾ ಎರಡೋ ಬಾರಿ ಬಂದಿರಬಹರುದು. ನಾನು ಶಾಸಕರು ಬಂದ ತಕ್ಷಣ ಅವರಿಗೆ ಗೌರವ ಕೊಟ್ಟು ಕೆಲಸ ಮಾಡಿಕೊಡುತ್ತೇನೆ. ಸುಮ್ಮನೆ ತಪ್ಪು ಮಾಹಿತಿ ನೀಡಬೇಡಿ ಎಂದು ತಾಕೀತು ಮಾಡಿದರು.
ಅಮೃತ ನಗರೋತ್ಥಾನ ಯೋಜನೆಯಡಿ ಬಜಪೆ ಪಟ್ಟಣ ಪಂಚಾಯ್ತಿಗೆ 5 ಕೋಟಿ ರೂ.ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಒಂದೇ ಬಾರಿಗೆ ಹಣ ಬಿಡುಗಡೆ ಕಷ್ಟ ಸಾಧ್ಯ. ಬಜಪೆ ಪಟ್ಟಣ ಪಂಚಾಯಿತಿ ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿಸಲಾಗಿದೆ. ಹೀಗಾಗಿ ಹಂತ-ಹಂತವಾಗಿ ಹಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು.







