ಬ್ರಿಟನ್ ಪ್ರಧಾನಿಯ ಮುಸ್ಲಿಮ್ ವಿರೋಧಿ ಹೇಳಿಕೆಯನ್ನು ಅಳಿಸಿ ಹಾಕಿದ ಫೇಸ್ಬುಕ್

ಲಂಡನ್, ಮಾ.11: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 2018ರಲ್ಲಿ ಮಾಡಿದ್ದ ವಿವಾದಾತ್ಮಕ ಹೇಳಿಕೆಯನ್ನು ನಕಲಿ ಫೇಸ್ಬುಕ್ ಖಾತೆಯ ಮೂಲಕ ಮತ್ತೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ತಕ್ಷಣ ಅದನ್ನು ದ್ವೇಷಹೇಳಿಕೆ ಎಂದು ಪರಿಗಣಿಸಿ ಫೇಸ್ಬುಕ್ ಅಳಿಸಿ ಹಾಕಿದೆ ಎಂದು ವರದಿಯಾಗಿದೆ. ದ್ವೇಷಹೇಳಿಕೆ, ದ್ವೇಷದ ಭಾಷಣದ ವಿಷಯದಲ್ಲಿ ಫೇಸ್ಬುಕ್ನ ಕಾರ್ಯನೀತಿಯನ್ನು ಪರೀಕ್ಷಿಸಲು ‘ಬಿಗ್ಬ್ರದರ್ ವಾಚ್’ ಎಂಬ ಮಾಧ್ಯಮ ನಿಗಾ ಸಂಸ್ಥೆ ಜಾನ್ಸನ್ ಅವರ ಹೇಳಿಕೆಯನ್ನು ನಕಲಿ ಫೇಸ್ಬುಕ್ ಖಾತೆಯ ಮೂಲಕ ಮತ್ತೆ ಪೋಸ್ಟ್ ಮಾಡಿತ್ತು.
ಈ ಹೇಳಿಕೆಯಲ್ಲಿನ ಪದಗಳು ಬೆದರಿಸುವ ಮತ್ತು ಕಿರುಕುಳ ನೀಡುವ ಉದ್ದೇಶದ ವರ್ಗಕ್ಕೆ ಸೇರಿವೆ ಎಂದು ವಿಶ್ಲೇಷಿಸಿದ್ದ ಫೇಸ್ಬುಕ್, ಈ ಹೇಳಿಕೆಯನ್ನು ತಕ್ಷಣ ಸಾಮಾಜಿಕ ವೇದಿಕೆಯಿಂದ ತೆಗೆದುಹಾಕಿದೆ. 2018ರಲ್ಲಿ ‘ಡೈಲಿ ಟೆಲಿಗ್ರಾಫ್’ ಪತ್ರಿಕೆಯಲ್ಲಿನ ತಮ್ಮ ಅಂಕಣದಲ್ಲಿ ಜಾನ್ಸನ್ ಬುರ್ಖಾ ಧರಿಸುವ ಮುಸ್ಲಿಮ್ ಮಹಿಳೆಯರು ಪೋಸ್ಟ್ ಬಾಕ್ಸ್ ನಂತೆ ಕಾಣುತ್ತಾರೆ ಎಂದು ಬರೆದಿದ್ದರು. ಈ ಹೇಳಿಕೆಯನ್ನು ನಕಲಿ ಖಾತೆಯಲ್ಲಿ ಉಲ್ಲೇಖಿಸಿದ ಬಿಗ್ ಬ್ರದರ್ ವಾಚ್, ಮುಸ್ಲಿಮ್ ಮಹಿಳೆಯ ಫೋಟೋ ಹಾಗೂ ‘ಜನರು ಪೋಸ್ಟ್ ಬಾಕ್ಸ್ ನಂತೆ ತಿರುಗಾಡುವುದನ್ನು ಆಯ್ಕೆ ಮಾಡುವುದು ಸಂಪೂರ್ಣ ಹಾಸ್ಯಾಸ್ಪದ’ ಎಂದು ಶೀರ್ಷಿಕೆ ಪ್ರಕಟಿಸಿತ್ತು.
ಈ ಹೇಳಿಕೆಯನ್ನು ಫೇಸ್ಬುಕ್ ತೆಗೆದುಹಾಕಿದೆ. ಬ್ರಿಟನ್ ನ ಕನ್ಸರ್ವೇಟಿವ್ ಪಕ್ಷ ಮುಸ್ಲಿಮರ ಕುರಿತು ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದೆ. ಜಾನ್ಸನ್ ಅವರ ಹೇಳಿಕೆ ಪಕ್ಷದ ನೀತಿಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಪಕ್ಷ ನಡೆಸಿದ ಆಂತರಿಕ ತನಿಖೆಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಮುಸ್ಲಿಮ್ ಮಹಿಳೆಯರು ಬ್ಯಾಂಕ್ ದರೋಡೆಗೋರರಂತೆ ಕಾಣುತ್ತಾರೆ ಎಂದು ಈ ಹಿಂದೆ ಜಾನ್ಸನ್ ಹೇಳಿಕೆ ನೀಡಿದ್ದರು.







