ಸಿಬಿಎಸ್ಇ 10,12ನೇ ತರಗತಿ ಟರ್ಮ್ 2 ಪರೀಕ್ಷಾ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ,ಮಾ.11: 2022ನೇ ಸಾಲಿನ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಎರಡನೆ ಅವಧಿಯ (ಟರ್ಮ್2) ಪರೀಕ್ಷಾ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.
10 ಮತ್ತು 12ನೇ ತರಗತಿಗಳ ಎರಡನೆ ಅವಧಿಯ ಪರೀಕ್ಷೆಗಳು ಎಪ್ರಿಲ್ 26ರಂದು ಆರಂಭಗೊಳ್ಳಲಿದ್ದು, ಮೇ 24ರವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯ ಅಧಿಕೃತ ವೆಬ್ಸೈಟ್ ಗಳಾದ cbse.gov.in ಹಾಗೂ cbseacademic.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪರೀಕ್ಷೆಗೆ ಹಾಜರಾಗಲು ಬೇಕಾದ ಪ್ರವೇಶಪತ್ರಗಳನ್ನು ವಿದ್ಯಾರ್ಥಿಗಳು ಆಯಾ ಶಾಲೆಗಳಿಂದ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊರೋನ ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ಶಾಲೆಗಳು ಮುಚ್ಚುಗಡೆಗೊಂಡಿರುವುದನ್ನು ಗಮನದಲ್ಲಿರಿಸಿಕೊಂಡು ಮೊದಲನೆ ಅವಧಿ ಹಾಗೂ ಎರಡನೆ ಅವಧಿಯ ಪರೀಕ್ಷೆಗಳ ನಡುವೆ ಗಣನೀಯವಾದ ಸಮಯದ ಅಂತರವನ್ನು ಇರಿಸಿರುವುದಾಗಿ ಪರೀಕ್ಷಾ ಮಂಡಳಿ ತಿಳಿಸಿದೆ.
ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಎರಡನೆ ಅವಧಿಯ ಪರೀಕ್ಷೆಗೆ ಸಂಬಂಧಿಸಿ ಮಂಡಳಿಯು ಕೋವಿಡ್ಗೆ ಸಂಬಂಧಿಸಿದ ಸೂಚನೆಗಳನ್ನು ಕೂಡಾ ಪ್ರಕಟಿಸಿದೆ.
ಸಿಬಿಎಸ್ಇ 10 ಮತ್ತು 12ನೇ ತರಗತಿಗಳಿಗೆ ಎರಡು ಅವಧಿಗಳ ಪರೀಕ್ಷೆಗಳನ್ನು ಆಯೋಜಿಸಲಾಗಿದೆ. ಮೊದಲನೆ ಅವಧಿಯ (ಟರ್ಮ್ 1) ಪರೀಕ್ಷೆಗಳು ಈಗಾಗಲೇ ನಡೆದಿರುತ್ತದೆ.





