ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಈಗ ತಿಹಾರ್ ಜೈಲಿನ ಫಿಟ್ನೆಸ್ ಕೋಚ್!

ಸುಶೀಲ್ ಕುಮಾರ್
ಹೊಸದಿಲ್ಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಸಹ ಕೈದಿಗಳಿಗೆ ಕುಸ್ತಿ ಮತ್ತು ಫಿಟ್ನೆಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಮಾರ್ ಅವರ ತರಗತಿಗಳಿಗೆ ಕನಿಷ್ಠ 10 ಮಂದಿ ಸಹ ಕೈದಿಗಳು ಸೇರಿದ್ದು, ಜೈಲು ಆವರಣದೊಳಗೆಯೇ ತರಬೇತಿ ನಡೆಯುತ್ತಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ ಕುಮಾರ್ ಅವರಷ್ಟೇ ವ್ಯಾಯಾಮ ಮಾಡುತ್ತಿದ್ದು, ಜೆಎನ್ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಅವರು ಇದೀಗ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ ಎಂದು hindustantimes ವರದಿ ಮಾಡಿದೆ.
ಜೈಲಿನ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಸಹ ಕೈದಿಗಳಿಗೆ ಕುಮಾರ್ ಅವರ ತರಗತಿ ಅಧಿಕೃತವಾಗಿ ಕಳೆದ ವಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜೈಲು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ಕುಮಾರ್ ಜೈಲು ಅಧೀಕ್ಷಕರನ್ನು ಭೇಟಿ ಮಾಡಿ ಜೈಲಿನ ಒಳಗೆ ಫಿಟ್ನೆಸ್ ಕೇಂದ್ರವನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜೈಲಿನಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳಲ್ಲಿ ಸಂಗೀತ, ಚಿತ್ರಕಲೆ, ಸೆಣಬು, ಮುಂಬತ್ತಿ ಮತ್ತು ಸುಂಗಧ ದ್ರವ್ಯದಂಥ ವಸ್ತುಗಳ ಉತ್ಪಾದನಾ ಘಟಕ ನಡೆಸಬಹುದು. ಇವುಗಳನ್ನು ಅಧಿಕೃತವಾಗಿ ಸ್ಥಾಪಿಸಿದಾಗ ಜೈಲು ಅಧಿಕಾರಿಗಳು ಇದರ ಮೇಲೆ ಕಣ್ಗಾವಲು ಇಡುತ್ತಾರೆ. ಇಂಥ ಚಟುವಟಿಕೆಗಳು ಕೈದಿಗಳ ಮಾನಸಿಕ ಅರೋಗ್ಯದ ಮೇಲೆ ಬೀರುವ ಪ್ರಭಾವವನ್ನು ಮೌಲ್ಯಮಾಪನ ಮಾಡಿ ಜೈಲು ಅಧೀಕ್ಷಕರಿಗೆ ಕಳುಹಿಸಲಾಗುತ್ತದೆ. ಕೈದಿಗಳು ಖಿನ್ನತೆಗೆ ಒಳಗಾಗದಂತೆ ತಡೆಯುವ ಸಲುವಾಗಿ ಇಂಥ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತದೆ.