177 ವರ್ಷದ ದಿಮ್ಹಾನ್ಸ್ ಕಡೆಗಣನೆ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಧಾರವಾಡ: 177 ವರ್ಷಗಳಷ್ಟು ಹಳೆಯ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ(ದಿಮ್ಹಾನ್ಸ್)ಯನ್ನು ನರವಿಜ್ಞಾನಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸದೇ ಇರುವ ಬಗ್ಗೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ಕ್ರಮ ಕೈಗೊಳ್ಳಲು ಕಳೆದ ಮೂರು ತಿಂಗಳಿಂದ ಸರ್ಕಾರ ವಿಫಲವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹಣಕಾಸಿನ ಕೊರತೆಯಿಂದಾಗಿ ಈ ಸಂಸ್ಥೆಯನ್ನು ನರವಿಜ್ಞಾನ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ ಬಂದಿದ್ದ ಸರ್ಕಾರ ಇತ್ತೀಚೆಗೆ 177 ವರ್ಷ ಹಳೆಯ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿತ್ತು. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳ ರೋಗಿಗಳಿಗೆ ಸೇವೆ ಒದಗಿಸುತ್ತಿರುವ ಸಂಸ್ಥೆಯಲ್ಲಿ ಎಂಆರ್‍ಐ ಮೆಷಿನ್ ಅಳವಡಿಸುವುದಾಗಿ 2021ರ ನವೆಂಬರ್ ನಲ್ಲಿ ವಿಚಾರಣೆ ವೇಳೆ ಸರ್ಕಾರ ಭರವಸೆ ನೀಡಿತ್ತು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸೋಮವಾರ, ರಾಜ್ಯ ಸರ್ಕಾರದ ಉದಾಸೀನದ ವಿರುದ್ಧ ಕಿಡಿಕಾರಿದ್ದು, ಎಂಆರ್‍ಐ ಮೆಷಿನ್‍ಗಳನ್ನು ತಕ್ಷಣವೇ ಅಳವಡಿಸುವಂತೆ ಸೂಚನೆ ನೀಡಿತ್ತು. ಜತೆಗೆ ಮೇಲ್ದರ್ಜೆಗೇರಿಸಿದ ನರವಿಜ್ಞಾನಗಳ ಆಸ್ಪತ್ರೆ ಎಪ್ರಿಲ್ 1ರಿಂದ ಕಾರ್ಯಾರಂಭಿಸುವುದನ್ನು ಖಾತರಿಪಡಿಸುವಂತೆ ಆದೇಶಿಸಿತ್ತು.
ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಮೂರು ತಿಂಗಳ ಕಾಲಾವಕಾಶ ನೀಡಿದ ಬಳಿಕವೂ ಸರ್ಕಾರ ಏನೂ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಸೌಲಭ್ಯ ಕಲ್ಪಿಸಲು ಸಾಧ್ಯವಾಗದಿದ್ದರೆ ಸಂಸ್ಥೆಯನ್ನು ಮುಚ್ಚಿ ಎಂದು ಹೇಳಿದರು.
"ಸಂಸ್ಥೆಯನ್ನು ಮುಚ್ಚಿದರೆ ನಂತರ ಮೇಲ್ದರ್ಜೆಗೇರಿಸುವ ಪ್ರಶ್ನೆಯೇ ಬರುವುದಿಲ್ಲ" ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರು, ಎಂಆರ್‍ಐ ಯಂತ್ರಗಳ ಖರೀದಿಗೆ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ ಮುಗಿದಿದೆ. ಈ ಯಂತ್ರಗಳು ಅಮೆರಿಕದಿಂದ ಬರಬೇಕು. ಯಂತ್ರಗಳ ಅಳವಡಿಕೆಗೆ ಸಿದ್ಧತೆಗಳು ನಡೆಯುತ್ತಿದ್ದು, ಆಸ್ಪತ್ರೆ ಮೇಲ್ದರ್ಜೆಗೇರಿಸಲು ಹಣಕಾಸು ಅಗತ್ಯ ಎಂದು ಹೇಳಿದರು.







