30ನೇ ದಿನಕ್ಕೆ ಕಾಲಿಟ್ಟ ವಾಲ್ಮೀಕಿ ಸ್ವಾಮೀಜಿಯ ಅಹೋರಾತ್ರಿ ಧರಣಿ

ಬೆಂಗಳೂರು: ಪರಿಶಿಷ್ಟ ಪಂಗಡದ ಸಮುದಾಯಗಳ ಮೀಸಲಾತಿಯನ್ನು ಶೇ.3ರಿಂದ ಶೇ.7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಹೋರಾತ್ರಿ ಧರಣಿಯನ್ನು ಆರಂಭಿಸಿ ಮೂವತ್ತು ದಿನಗಳು ಕಳೆದಿವೆ.
ಈ ಕುರಿತು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ರಾಜ್ಯ ಸರಕಾರವು ಜನಸಂಖ್ಯಾ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ನ್ಯಾ. ನಾಗಮೋಹನ್ ವರಿದಿಯು ಜನಸಂಖ್ಯಾ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸಿದ್ದು, ಸರಕಾರ ಅದನ್ನು ಜಾರಿಗೊಳಿಸುತ್ತಿಲ್ಲ. ರಾಜ್ಯ ಸರಕಾರವು ಪರಿಶಿಷ್ಟ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ ವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಕೀಲ ಅನಂತ ನಾಯಕ್ ಮಾತನಾಡಿ, ದೇಶದಲ್ಲಿ ಶೇ.3ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬ್ರಾಹ್ಮಣ ಸಮುದಾಯ ಸೇರಿದಂತೆ ಸಾಮಾನ್ಯ ವರ್ಗದ ಸಮು ದಾಯಗಳಿಗೆ ಶೇ.10 ರಷ್ಟು ಮೀಸಲಾತಿ ಯನ್ನು ತರಾತುರಿಯಲ್ಲಿ ಜಾರಿಗೊಳಿಸಿದ್ದಾರೆ. ವಿಪರ್ಯಾಸವೆಂದರೆ ಈ ಸಮುದಾಯಗಳು ಆರಂಭದಲ್ಲಿ ಮೀಸಲಾತಿಯನ್ನು ವಿರೋಧಿಸಿದ್ದವು.
ಯಾವುದೇ ಹೋರಾಟ ಮಾಡದಿದ್ದರೂ, ಸರಕಾರಗಳಿಗೆ ಮನವಿ ಪತ್ರಗಳನ್ನು ಸಲ್ಲಿಸದಿದ್ದರೂ, ಶೇ.10ರಷ್ಟು ಮೀಸಲಾತಿಯನ್ನು ರಾತ್ರೋರಾತ್ರಿ ನೀಡಿದ್ದಾರೆ. ಆದರೆ ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಅನೇಕ ಹೋರಾಟ ಮಾಡಿ ಸರಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿದರೂ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಹತ್ತಿಕ್ಕಲು ಸುಭಾಷ್ ಅಡಿ ಸಮಿತಿಯನ್ನು ರೂಪಿಸಲಾಗಿದೆ. ಹಾಗಾಗಿ ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಪರಾಮರ್ಶೆ ಮಾಡುವ ಅಂಶವನ್ನು ಸುಭಾಷ್ ಅಡಿ ಸಮಿತಿಯಿಂದ ಹೊರಗಿಟ್ಟು, ಕೂಡಲೇ ಪರಿಶಿಷ್ಟ ಮೀಸಲಾತಿಯನ್ನು ಹೆಚ್ಚಿಸಲು ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ ಅವರು, ಆಯೋಗದ ಮೇಲೆ ಆಯೋಗವನ್ನು ರೂಪಿಸುವುದು ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಆರ್ಥಿಕ ಯೋಜನೆಗಳನ್ನು ರೂಪಿಸಲು ಎಸ್‌ಇಎಸ್‌ಪಿ ಹಾಗೂ ಟಿಎಸ್ಪಿ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆ ಅಡಿ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲು ಜನಸಂಖ್ಯಾ ಆಧಾರದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಶೇ.17ರಷ್ಟು ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಿಡಲಾಗುತ್ತಿದೆ. ಇದನ್ನು ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ವಿಸ್ತರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.







