ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿ 71ನೇ ಅಂತರ್‌ರಾಷ್ಟ್ರೀಯ ಶತಕ ಗಳಿಸುವರೇ?
ಇಂದಿನಿಂದ ಬೆಂಗಳೂರಿನಲ್ಲಿ ದ್ವಿತೀಯ ಟೆಸ್ಟ್ ಆರಂಭ

ಬೆಂಗಳೂರು, ಮಾ.11: ಕಳೆದ 28 ತಿಂಗಳುಗಳಿಂದ 71ನೇ ಅಂತರ್‌ರಾಷ್ಟ್ರೀಯ ಶತಕ ಗಳಿಸಲು ಪ್ರಯತ್ನಿಸುತ್ತಿರುವ ವಿರಾಟ್ ಕೊಹ್ಲಿ ಶನಿವಾರದಿಂದ ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತನ್ನ ನೆಚ್ಚಿನ ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶತಕದ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಕೊಹ್ಲಿ 2019ರ ನವೆಂಬರ್‌ನಲ್ಲಿ ಕೋಲ್ಕತಾದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಹಗಲು-ರಾತ್ರಿ ಪಂದ್ಯದಲ್ಲಿ ಕೊನೆಯ ಬಾರಿ ಶತಕವನ್ನು ಸಿಡಿಸಿದ್ದರು. ಆ ಪಂದ್ಯದಲ್ಲಿ ಕೊಹ್ಲಿ 136 ರನ್ ಗಳಿಸಿದ್ದರು. ಭಾರತವು ಬಾಂಗ್ಲಾವನ್ನು ಇನಿಂಗ್ಸ್ ಹಾಗೂ 46 ರನ್‌ಗಳಿಂದ ಸೋಲಿಸಿತ್ತು.
ಭಾರತದ ಮಾಜಿ ನಾಯಕ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಗಳಿಸಿದ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 68 ಇನಿಂಗ್ಸ್ ಗಳಲ್ಲಿ ಆಡಿದ್ದರೂ ಶತಕವು ಅವರಿಗೆ ಮರೀಚಿಕೆಯಾಗುಳಿಯಿತು. ಕೊಹ್ಲಿ ಉತ್ತಮ ಆರಂಭ ಪಡೆದಿದ್ದರೂ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಿಲ್ಲ.ಕೋಲ್ಕತಾದ ಇನಿಂಗ್ಸ್ ಬಳಿಕ 22 ಬಾರಿ 50ಕ್ಕೂ ಅಧಿಕ ರನ್ ಗಳಿಸಿದರೂ 71ನೇ ಅಂತರ್‌ರಾಷ್ಟ್ರೀಯ ಶತಕವನ್ನು ಇನ್ನೂ ಗಳಿಸಿಲ್ಲ. 33ರ ಹರೆಯದ ಕೊಹ್ಲಿ ಈ ವರ್ಷದ ಜನವರಿಯಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಸ್ಕೋರ್(79 ರನ್)ಗಳಿಸಿದ್ದರು.
ಐಪಿಎಲ್ ಪ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 10 ವರ್ಷ ಗಳಿಂದ ಮುನ್ನಡೆಸುತ್ತಿರುವ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದು, ಈ ಮೈದಾನ ಅವರಿಗೆ ಚಿರಪರಿಚಿತವಾಗಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಬೆಳೆಯುತ್ತಿರುವ ಸ್ಟಾರ್ ಕ್ರಿಕೆಟರ್ ಕೊಹ್ಲಿ ಮೇಲೆ ಯಾವಾಗಲೂ ನಿರೀಕ್ಷೆಗಳು ಹೆಚ್ಚಾಗಿರುತ್ತದೆ. ಇದೀಗ ಅವರು ವೃತ್ತಿಜೀವನದಲ್ಲಿ ಅತ್ಯಂತ ಹೆಚ್ಚು ಸವಾಲು ಎದುರಿಸುತ್ತಿದ್ದಾರೆ..
ಕೊಹ್ಲಿ ಮೊಹಾಲಿಯಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಶ್ರೀಲಂಕಾದ ಕಳಪೆ ಬೌಲಿಂಗ್ ದಾಳಿಯ ವಿರುದ್ಧ, ಬೇರೆಯದಕ್ಕೆ ಹೋಲಿಸಿದರೆ ಸಣ್ಣ ಮೈದಾನವಾಗಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿಗೆ ಶತಕ ಗಳಿಸುವ ಉತ್ತಮ ಅವಕಾಶವಿದೆ.
ತಂಡ ಸಂಯೋಜನೆ: ಇದು ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿರುವ ಕಾರಣ ಫಿಟ್‌ನೆಸ್ ಪಡೆದಿರುವ ಆಲ್‌ರೌಂಡರ್ ಅಕ್ಷರ್ ಪಟೇಲ್ ಅಥವಾ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರು ಜಯಂತ್ ಯಾದವ್ ಬದಲಿಗೆ ಆಡುವ 11ರ ಬಳಗದಲ್ಲಿ ಸೇರುವ ಸಾಧ್ಯತೆಯಿದೆ. ಈ ಇಬ್ಬರಿಗೂ ಡೇ-ನೈಟ್ ಪಂದ್ಯದಲ್ಲಿ ಎದುರಾಳಿಗೆ ಸವಾಲೊಡ್ಡುವ ಸಾಮರ್ಥ್ಯವಿದೆ.
ಜಯಂತ್ ಮೊಹಾಲಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಶ್ರೀಲಂಕಾ ಬ್ಯಾಟಿಂಗ್ ಮಾಡಲು ಪರದಾಟ ನಡೆಸುತ್ತಿದ್ದಾಗ ಎರಡೂ ಇನಿಂಗ್ಸ್‌ಗಳಲ್ಲಿ 17 ಓವರ್ ಬೌಲಿಂಗ್ ಮಾಡಿದ್ದ ಜಯಂತ್ ವಿಕೆಟ್ ಪಡೆಯಲು ವಿಫಲರಾಗಿದ್ದರು.
ಅಕ್ಷರ್ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ಆಡಿರುವ ತನ್ನ ಕೊನೆಯ ಪಿಂಕ್‌ಬಾಲ್ ಟೆಸ್ಟ್ ನಲ್ಲಿ 11 ವಿಕೆಟ್‌ಗಳನ್ನು ಉರುಳಿಸಿದ್ದರು.
ಶ್ರೀಲಂಕಾ ಪರದಾಟ: ಭಾರತ ಕ್ರಿಕೆಟ್ ತಂಡದ ಸವಾಲವನ್ನು ಎದುರಿಸುವಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲದ ಶ್ರೀಲಂಕಾವು ವೇಗದ ಬೌಲರ್ ಲಹಿರು ಕುಮಾರ ಅನುಪಸ್ಥಿತಿಯಲ್ಲಿ ಆಡಬೇಕಾಗಿದೆ. ಗಾಯದ ಸಮಸ್ಯೆಯಿಂದಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ. ದುಷ್ಮಂತ ಚಾಮೀರ ಪ್ರವಾಸಿ ತಂಡದ 11ರ ಬಳಗವನ್ನು ಸೇರಬಹುದು.ನಾಯಕ ಡಿ.ಕರುಣರತ್ನೆ, ಹಿರಿಯ ಬ್ಯಾಟರ್ ಆ್ಯಂಜೆಲೊ ಮ್ಯಾಥ್ಯೂಸ್ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಸೆಗೊಳಿಸಿದ್ದಾರೆ.
2022ರಲ್ಲಿ ಭಾರತಕ್ಕೆ ಕೊನೆಯ ಸ್ವದೇಶಿ ಟೆಸ್ಟ್ ಪಂದ್ಯ : ಟೀಮ್ ಇಂಡಿಯ 2022ರಲ್ಲಿ ತವರು ನೆಲದಲ್ಲಿ ಆಡಲಿರುವ ಕೊನೆಯ ಟೆಸ್ಟ್ ಪಂದ್ಯ ಇದಾಗಿದೆ. ಲಂಕಾದ ಸರಣಿಯ ಬಳಿಕ ಹಾಲಿ ಡಬ್ಲುಟಿಸಿ ವರ್ತುಲದಲ್ಲಿ ಇನ್ನೂ 7 ಟೆಸ್ಟ್ ಗಳಿವೆ. ಭಾರತವು 2 ಪಂದ್ಯಗಳ ಸರಣಿಯನ್ನಾಡಲು ಬಾಂಗ್ಲಾದೇಶಕ್ಕೆ ಪ್ರಯಾಣಿಸಲಿದೆ. ಆನಂತರ 2023ರಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯವು ಭಾರತಕ್ಕೆ ಆಗಮಿಸಲಿದೆ.
ಶ್ರೀಲಂಕಾ ಹಾಗೂ ಭಾರತದ ಪಾಲಿಗೆ ಇದು 4ನೇ ಡೇ-ನೈಟ್ ಟೆಸ್ಟ್ ಪಂದ್ಯವಾಗಿದೆ. ಉಭಯ ತಂಡಗಳು ತಲಾ 2ರಲ್ಲಿ ಜಯ, ಒಂದರಲ್ಲಿ ಸೋಲುಂಡಿದೆ.
ಪ್ರೇಕ್ಷಕರ ಸಾಮರ್ಥ್ಯ ಹೆಚ್ಚಳ: ಎರಡು ವರ್ಷಗಳ ಬಳಿಕ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂಗೆ ವಾಪಸಾಗುತ್ತಿದ್ದಾರೆ. ಕರ್ನಾಟಕ ಸರಕಾರವು ಈ ಹಿಂದೆ ಅನುಮತಿ ನೀಡಿದಂತೆ ಶೇ.50ರಷ್ಟು ಸಾಮರ್ಥ್ಯದ ಬದಲಿಗೆ ಶೇ.100ರಷ್ಟು ಸಾಮರ್ಥ್ಯದಲ್ಲಿ ಪಂದ್ಯ ನಡೆಸಲು ಕೆಎಸ್‌ಸಿಎಗೆ ಗುರುವಾರ ಕರ್ನಾಟಕ ಸರಕಾರ ಅನುಮತಿ ನೀಡಿದೆ.
ತಂಡಗಳು: ಭಾರತ: ರೋಹಿತ್ ಶರ್ಮಾ(ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್‌ಕೀಪರ್), ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಭರತ್, ಉಮೇಶ್ ಯಾದವ್, ಸೌರಭ್ ಕುಮಾರ್, ಪ್ರಿಯಾಂಕ್ ಪಾಂಚಾಲ್.
ಶ್ರೀಲಂಕಾ: ಡಿ.ಕರುಣರತ್ನೆ(ನಾಯಕ), ಧನಂಜಯ ಡಿಸಿಲ್ವಾ, ಚರಿತ್ ಅಸಲಂಕ, ದುಷ್ಮಂತ ಚಾಮೀರ, ದಿನೇಶ್ ಚಾಂಡಿಮಲ್, ಆ್ಯಂಜೆಲೊ ಮ್ಯಾಥ್ಯೂಸ್, ನಿರೋಶನ್ ಡಿಕ್ವೆಲ್ಲಾ, ಲಸಿತ್ ಎಂಬುಲ್ಡೇನಿಯ, ವಿಶ್ವ ಫೆರ್ನಾಂಡೊ, ಸುರಂಗ ಲಕ್ಮಲ್, ಲಹಿರು ತಿರಿಮನ್ನೆ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಪಾಥುಮ್ ನಿಸ್ಸಾಂಕ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕಾ ಕರುಣರತ್ನೆ.