ತನ್ನ ಹಿಂದಿನ ಶ್ರೇಷ್ಠ ಪ್ರದರ್ಶನ ಸರಿಗಟ್ಟಿದ ಉಕ್ರೇನ್
ಚಳಿಗಾಲದ ಪ್ಯಾರಾಲಿಂಪಿಕ್ಸ್

ಬೀಜಿಂಗ್, ಮಾ.11: ಅಪಾರ ಅನಿಶ್ಚಿತತೆ ಹಾಗೂ ಸ್ವದೇಶದಲ್ಲಿ ಪ್ರೀತಿಪಾತ್ರರ ಸುರಕ್ಷತೆ ಹಾಗೂ ಯೋಗಕ್ಷೇಮದ ಕುರಿತಾಗಿ ಭಯದ ಹೊರತಾಗಿಯೂ ಶುಕ್ರವಾರದ ಮಧ್ಯಾಹ್ನದ ವೇಳೆ ಉಕ್ರೇನ್ ತಂಡವು ಚಳಿಗಾಲದ ಪ್ಯಾರಾಲಿಂಪಿಕ್ಸ್ ನಲ್ಲಿ ತಾನು ಈ ಹಿಂದೆ ನೀಡಿದ್ದ ಶ್ರೇಷ್ಠ ಪ್ರದರ್ಶನವನ್ನು ಸರಿಗಟ್ಟಿತು. ಎರಡು ವಾರಗಳ ಹಿಂದೆ ಪೂರ್ವ ಯುರೋಪಿಯನ್ ರಾಷ್ಟ್ರದ ಮೇಲೆ ರಶ್ಯದ ಆಕ್ರಮಣದ ಆಘಾತದಿಂದ ತತ್ತರಿಸುತ್ತಿರುವ ಉಕ್ರೇನ್ ತಂಡ ಪದಕ ಪಟ್ಟಿಯಲ್ಲಿ ಆತಿಥೇಯ ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ. ದಾಖಲೆಯ 9 ಚಿನ್ನ ಸೇರಿದಂತೆ ಒಟ್ಟು 25 ಪದಕಗಳನ್ನು ಗೆದ್ದುಕೊಂಡಿದೆ. 2006ರಲ್ಲಿ ಟುರಿನ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ 7 ಚಿನ್ನ ಸಹಿತ ಒಟ್ಟು 25 ಪದಕಗಳನ್ನು ಜಯಿಸಿತ್ತು. ಇದು ಈ ತನಕ ಚಳಿಗಾಲದ ಪ್ಯಾರಾಲಿಂಪಿಕ್ಸ್ ನಲ್ಲಿ ದೇಶದ ಅತ್ಯುತ್ತಮ ಸಾಧನೆಯಾಗಿತ್ತು. ಖಾರ್ಕಿವ್‌ನಲ್ಲಿರುವ ತನ್ನ ಮನೆಗೆ ಬಾಂಬ್ ಬಿದ್ದಿದೆ ಎಂದು ತಿಳಿದ ಕೆಲವೇ ದಿನಗಳಲ್ಲಿ ಉಕ್ರೇನಿಯದ ಅತ್ಲೀಟ್ ಲಿಯುಡ್ಮಿಲಾ ಲಿಯಾಶೆಂಕೊ ಬೀಜಿಂಗ್‌ನ ಚಳಿಗಾಲದ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿ ಮಿಂಚಿದ್ದಾರೆ.
‘‘ನಾನು ಈ ಪದಕವನ್ನು ಉಕ್ರೇನಿಯನ್ ಜನತೆಗೆ, ನಮ್ಮನ್ನು ರಕ್ಷಿಸುವ ಸೈನ್ಯಕ್ಕೆ ಹಾಗೂ ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ’’ ಎಂದು 28ರ ಹರೆಯದ ಲಿಯಾಶೆಂಕೊ ಹೇಳಿದರು. ಶುಕ್ರವಾರ ಉಕ್ರೇನ್ ಹ್ಯಾಟ್ರಿಕ್ ಚಿನ್ನದ ಪದಕ ಜಯಿಸಿತು. ಒಲೆಕ್ಸಾಂಡರ್ ಕಾಝಿಕ್ ಹಾಗೂ ಒಕ್ಸಾನಾ ಶಿಶ್ಕೋವಾ ತಮ್ಮ ಅಂಧರ ಸ್ಪರ್ಧೆಗಳಲ್ಲಿ ಚಿನ್ನ ಜಯಿಸಿದರು. ಶಿಶ್ಕೋವಾ ಗೇಮ್ಸ್‌ನಲ್ಲಿ 3 ಚಿನ್ನ ಹಾಗೂ 2 ಬೆಳ್ಳಿ ಸಹಿತ ಒಟ್ಟು 5 ಪದಕಗಳನ್ನು ಜಯಿಸಿದರು. ನಾವು ನಮ್ಮ ದೇಶದ ಗೌರವವನ್ನು ಉಳಿಸಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.