ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ

ಬೆಂಗಳೂರು, ಮಾ.12: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನೆಲೆ ಕಳೆದುಕೊಳ್ಳುತ್ತಿದೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. 1995 ರಲ್ಲಿ ಏನು ಬೆಳವಣಿಗೆ ಇತ್ತೋ, ಅದೇ ರೀತಿಯ ಬೆಳವಣಿಗೆ 2022ರಲ್ಲೂ ಬಂದಿದೆ. ನಾನು ಕಾಂಗ್ರೆಸ್ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಎಐಸಿಸಿ ವರಿಷ್ಠೆ ಸೋನಿಯಾಗಾಂಧಿ ಅವರಿಗೆ ಕಳುಹಿಸುತ್ತಿದ್ದೇನೆ. ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹೀಂ ತಿಳಿಸಿದರು.
ಶನಿವಾರ ನಗರದ ಬೆನ್ಸನ್‍ಟೌನ್‍ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ರಾಜೀನಾಮೆಯಿಂದ ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತ ಬರುತ್ತದೆ. ಮಾ.20ರ ಬಳಿಕ ಬಹಳ ಜನ ನನ್ನ ಜೊತೆ ಬರುತ್ತಾರೆ. ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೊಡುತ್ತೇನೆ ಎಂದರು.
ಇಂದು ಅಥವಾ ನಾಳೆ ನಾನು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಜೊತೆ ಚರ್ಚೆ ಮಾಡುತ್ತೇನೆ. ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಈಗ ಅಧಿಕೃತವಾಗಿ ನಾನು ಸ್ವತಂತ್ರವಾಗಿದ್ದೇನೆ. ನಾನು ಕಾಂಗ್ರೆಸ್ ಬಿಟ್ಟು ಹೋಗುತ್ತಿರುವ ಬಗ್ಗೆ ನೋವಿದೆ. ಅಲ್ಲಿ ಅನೇಕ ಜನ ನನ್ನ ಸ್ನೇಹಿತರಿದ್ದಾರೆ. ಅವರನ್ನೆಲ್ಲಾ ಬಿಟ್ಟು ಹೋಗುತ್ತಿರುವುದು ನೋವು ತಂದಿದೆ. ಈಗ ನನಗೆ ಇರುವ ಸುಲಭವಾದ ದಾರಿ ಜೆಡಿಎಸ್ ಪಕ್ಷ ಮಾತ್ರ. ಆ ಪಕ್ಷದ ನಾಯಕರ ಜೊತೆ ಇನ್ನೊಂದು ಸುತ್ತಿನ ಮಾತುಕತೆ ಮಾಡಿ, ನಿರ್ಧಾರ ಪ್ರಕಟಿಸುತ್ತೇನೆ ಎಂದು ಅವರು ಹೇಳಿದರು.
ಜೆಡಿಎಸ್, ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕೇಳಿ ಬರುತ್ತಿರುವ ಆಪಾದನೆ ಕುರಿತು ನಾನು ಪಕ್ಷ ಸೇರ್ಪಡೆ ನಂತರ ಮಾತುಕತೆ ನಡೆಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಪಂಜಾಬ್ ರಾಜ್ಯದಲ್ಲಿ ಆದ ಪರಿಸ್ಥಿತಿಯೇ ನಮ್ಮ ರಾಜ್ಯದಲ್ಲಿಯೂ ಕಾಂಗ್ರೆಸ್‍ಗೆ ಆಗಲಿದೆ. ಸಿದ್ದರಾಮಯ್ಯರ ಸಾಫ್ಟ್ ಕಾರ್ನರ್ ನಿಂದ ಯಡಿಯೂರಪ್ಪರ ಸರಕಾರ ಅಧಿಕಾರಕ್ಕೆ ಬಂದಿದೆ. ದೇವೇಗೌಡರು ದೇಶದ ಪ್ರಧಾನಿ ಆಗುತ್ತಾರೆ ಎಂದಿದ್ದೆ. ನಾನು ಕಾಲಿಟ್ಟ ಕಡೆ ಒಳ್ಳೆಯದಾಗಿದೆ. ಭಗವಂತ ಹಾಗೂ ಜನ ನನ್ನ ಕೈ ಬಿಟ್ಟಿಲ್ಲ ಎಂದು ಅವರು ಹೇಳಿದರು.
ಹಿಜಾಬ್ ಬಗ್ಗೆ ನನ್ನ ಸಲಹೆ ಕೇಳಿಲ್ಲ. ಹಿಜಾಬ್ ಅನ್ನೋದನ್ನ ಸೆರಗು ಅನ್ನಿ ಎಂದೆ. ಯಾರು ನನ್ನ ಮಾತನ್ನು ಕೇಳಿಲ್ಲ ಎಂದರು. ಇದೇ ವೇಳೆ ಯು.ಟಿ.ಖಾದರ್ ಗೆ ವಿಪಕ್ಷ ಉಪ ನಾಯಕನ ಸ್ಥಾನ ಕೊಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯು.ಟಿ.ಖಾದರ್ ಗೆ ಕೊಟ್ಟಿರುವ ಚಡ್ಡಿ ನನಗೆ ಆಗುವುದಿಲ್ಲ. ನನ್ನದು ದೊಡ್ಡ ಸೈಜ್. ಇಷ್ಟು ದಿನ ಇವರಿಗೆ ಮುಸ್ಲಿಮರು ಕಾಣಲಿಲ್ಲವೇ? ನಾನು ಧ್ವನಿ ಎತ್ತಿದ ಬಳಿಕ ಖಾದರ್ ಗೆ ಸ್ಥಾನ ನೀಡಿದ್ದಾರೆ ಎಂದು ಇಬ್ರಾಹೀಂ ತಿಳಿಸಿದರು.
ರಾಜ್ಯದಲ್ಲಿ ಶೇ.21ರಷ್ಟು ನಮ್ಮ ಜನಾಂಗ ಇದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತಾರೆ. ಒಳ್ಳೆಯದೆಲ್ಲಾ ಅವರ ಪಾಲು, ಬೇಡದ್ದೆಲ್ಲಾ ನಮ್ಮ ಪಾಲು. ಸಿದ್ದರಾಮಯ್ಯ ನಮ್ಮ ಮನೆಗೆ ಯಾವಾಗ ಬರುತ್ತಾರೋ, ಬರಲಿ ಬಿರಿಯಾನಿ ತಿನ್ನೋಕೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ನಮ್ಮ ಸ್ನೇಹಿತರು. ಈ ಹಿಂದೆ ನಾನು ಜೆಡಿಎಸ್‍ನಲ್ಲಿದ್ದಾಗ ಅವರೇ ನನ್ನ ಮನೆಗೆ ಬರುತ್ತಿದ್ದರು. ನಾನು ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದ ಅವಧಿಯಲ್ಲಿ ಕೊಟ್ಟ ವರದಿಯನ್ನು ಸರಕಾರ ಮುಂದಿಟ್ಟಿಲ್ಲ. ಬೊಮ್ಮಾಯಿಯವರು ಆ ವರದಿಯನ್ನು ತೆಗೆದು ನೋಡಲಿ ಎಂದು ಇಬ್ರಾಹೀಂ ಹೇಳಿದರು.
ವೀರೇಂದ್ರ ಪಾಟೀಲ್‍ರನ್ನು ಕೆಳಗಿಳಿಸಿ ಇನ್ನೂ ಕಾಂಗ್ರೆಸ್ ಸುಧಾರಿಸಿಕೊಳ್ಳುತ್ತಿದೆ. ಎಚ್.ಡಿ.ದೇವೇಗೌಡರು ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಕಾಂಗ್ರೆಸ್‍ನವರು ನಮಗೆ ಚೆನ್ನಾಗಿ ಮೇಕಪ್ ಮಾಡಿ, ಬಸ್ ಸ್ಟ್ಯಾಂಡ್‍ನಲ್ಲಿ ನಿಲ್ಲಿಸಿದ್ರು. ಹೋಗುವವರನ್ನು, ಬರುವವರನ್ನು ಕರೆಯುವ ಕೆಲಸ ಮಾಡಿದ್ರು. ಒಕ್ಕಲಿಗರು, ಸಾಬರು ಸೇರಿದ್ರೆ 65 ಸೀಟು ಬರುತ್ತದೆ. ಸಾಬರು, ಲಿಂಗಾಯತರು ಸೇರಿದ್ರೆ 110 ಸೀಟು ಬರುತ್ತದೆ. ಇದು ಸಿದ್ದರಾಮಯ್ಯರಿಗೂ ಗೊತ್ತಿದೆ ಎಂದು ಇಬ್ರಾಹೀಂ ಹೇಳಿದರು.
ಕಾಂಗ್ರೆಸ್‍ನವರು ನನ್ನನ್ನು ತಳ್ಳಿದ್ದು ಆಯ್ತು. ಈಗ ನಾವು ಹೊರಗೆ ಹೋಗುತ್ತಿದ್ದೇವೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‍ನ ಶಾಸಕ. ಯಡಿಯೂರಪ್ಪರನ್ನು ಬದಲಿಸಬೇಡಿ ಅಂತಾರೆ. ಅವರು ಯಾವ ಪಕ್ಷದ ಶಾಸಕರು? ನಾನು ಇದನ್ನು ಕೇಳಿದ್ದಕ್ಕೆ, ಉಗ್ರಪ್ಪನ ಕೈಯಲ್ಲಿ ಬೈಯಿಸಿದ್ರು. ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಸಿದ್ದರಾಮಯ್ಯರನ್ನು ನಂಬಿ ಕಾಂಗ್ರೆಸ್‍ಗೆ ಸೇರಿದೆ. ನನ್ನನ್ನು ನಡು ನೀರಲ್ಲಿ ಕೈ ಬಿಟ್ಟರು. ಟೆಂಟ್‍ಗೆ ಬೆಂಕಿ ಬಿದ್ದಿದೆ. ಎಲ್ಲರೂ ಗೇಟು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.







