ಜನರು ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ: ನ್ಯಾ. ನಾಗಮೋಹನ್ ದಾಸ್

ಬೆಂಗಳೂರು, ಮಾ.12: ಜನರು ಈಗಾಗಲೇ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕಾಯ್ದೆಗಳ ದುರ್ಬಳಕೆ ಹೆಚ್ಚಾಗುತ್ತಿರುವುದರಿಂದ, ಈಗ ನ್ಯಾಯಾಂಗದ ಮೇಲೆಯೂ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನ್ಯಾ. ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
ಶನಿವಾರ ನಗರದ ಗಾಂಧಿ ಭವನದಲ್ಲಿ ಅಭಿರುಚಿ ಪ್ರಕಾಶನ ವತಿಯಿಂದ ಬರಗೂರು ರಾಮಚಂದ್ರಪ್ಪನವರ ‘ಬೆವರು ನನ್ನ ದೇವರು’ ಸಮಗ್ರ ಸಾಹಿತ್ಯ ಸಂಪುಟಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಕಷ್ಟದ ಪರಿಸ್ಥಿತಿಗೆ ಬಂದಿದೆ. ಕೋಮುವಾದ ಗೆಲ್ಲುತ್ತಿದೆ. ಅಲ್ಪಸಂಖ್ಯಾತ, ದಲಿತರ ವಿರುದ್ಧ ಪಿತೂರಿ ನಡೆಸುವವರು ದೇಶವನ್ನು ಆಳುತ್ತಿದ್ದಾರೆ. ಇದನ್ನು ಖಂಡಿಸಿ ಪರ್ಯಾಯ ಭಾರತ ನಿರ್ಮಾಣಕ್ಕಾಗಿ ಬರಹಗಾರರು ಸೇರಿದಂತೆ ನ್ಯಾಯವಾದಿಗಳು ಮುನ್ನುಡಿಯನ್ನು ಬರೆಯಬೇಕಾಗಿದೆ ಎಂದು ಹೇಳಿದರು.
ಅಸೆಂಬ್ಲಿಯಲ್ಲಿ ಸುಳ್ಳು ಹೇಳುತ್ತಿದ್ದಾರೆ. ಎಲ್ಲಾ ವಲಯಗಳು ಭ್ರಷ್ಟಗೊಂಡಿವೆ. ನೈತಿಕ ಬದುಕು ಪ್ರಧಾನವಾಗಿದ್ದ ಕಾಲಘಟ್ಟ ಮರೆಯಾದ ಕಾರಣ ಇಂದು ಯಾರೂ ಮಾಡೆಲ್ ಆಗಿ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದಾಗ, ವಿರೋಧಪಕ್ಷದವರನ್ನು ಜೈಲಿಗೆ ಕಳುಹಿಸಿದರು. ಪತ್ರಿಕೆಗಳ ಮೇಲೆ ನಿರ್ಬಂಧವೇರಿದರು. ಸಂವಿಧಾನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿರುವ ಕುರಿತು ವಿವಿಧ ರಾಜ್ಯಗಳ ಹೈಕೋರ್ಟ್‍ಗಳಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಲಾಯಿತು. ಆದರೆ ಕೆಲವು ಹೈಕೋರ್ಟ್‍ಗಳು ಊರ್ಜಿತಗೊಳಿಸಿದರೆ, ಮತ್ತೆ ಕೆಲವು ಹೈಕೋರ್ಟ್‍ಗಳು ಅನೂರ್ಜಿತಗೊಳಿಸಿದವು. ಸುಪ್ರಿಂ ಅಂಗಳಕ್ಕೆ ಈ ವಿವಾದ ಬಂದಾಗ ಎಚ್.ಎನ್. ಖನ್ನಾ ಅರ್ಜಿಯನ್ನು ಊರ್ಜಿತಗೊಳಿಸಿದರು. ಅವರು ಅಲ್ಪಸಂಖ್ಯಾತರಾದ ಕಾರಣ ಅವರ ತೀರ್ಪನ್ನು ಪಾಲಿಸಲಾಗಿಲ್ಲ. ಆದರೆ ಎಚ್.ಎನ್ ಖನ್ನಾ ಸ್ವಾರ್ಥಕ್ಕಾಗಿ ತೀರ್ಪು ನೀಡಿಲ್ಲ. ಹಾಗಾಗಿ ಅವರು ಇಂದಿಗೂ ಲೆಜೆಂಡ್ ಆಗಿ ಉಳಿದಿದ್ದಾರೆ ಎಂದು ನ್ಯಾಯಾಂಗ ವ್ಯವಸ್ಥೆಯನ್ನು ಅವರು ನೆನೆಪಿಸಿಕೊಂಡರು.
ವಿಮರ್ಶಕ ಹಾಗೂ ಅನುವಾದಕ ಎಚ್.ಎಸ್. ರಾಘವೇಂದ್ರ ರಾವ್ ಮಾತನಾಡಿ, ವರ್ಣ ಪ್ರಜ್ಞೆಯನ್ನು ಮುನ್ನಲೆಗೆ ತಂದು ವರ್ಗ ಪ್ರಜ್ಞೆಯನ್ನು ಹಿಂದಕ್ಕಿಟ್ಟಿರುವುದು ಸಮಕಾಲೀನ ದುರಂತವಾಗಿದೆ. ವರ್ಣ, ಜಾತಿ, ಲಿಂಗ ಸಮಾನತೆ ತಕ್ಕ ಮಟ್ಟಕ್ಕೆ ಸಾಧಿಸುತ್ತಿದೆ ಆದರೂ, ವರ್ಗಗಳ ನಡುವಿನ ಕಂದಕ ಹೆಚ್ಚಾಗುತ್ತಲಿದೆ ಎಂದರು.
ವಿಮರ್ಶಕ ಬಸವರಾಜ ಕಲ್ಗುಡಿ ಮಾತನಾಡಿ, ಸರಿಸುಮಾರು ಅರ್ಧಶತಮಾನಗಳ ಕಾಲ ಕಮ್ಯುನಿಸ್ಟ್ ಸರಕಾರ ಪಶ್ಚಿಮ ಬಂಗಾಳವನ್ನು ಆಳ್ವಿಕೆ ಮಾಡಿದರೂ, ಇಂದು ಏಕೆ ಅಲ್ಲಿ ನಾಶವಾಗಿದೆ ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.
ಚಿಂತಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ಜನರ ಮಧ್ಯೆ ನಿಂತು ಸಮಸ್ಯೆಗಳನ್ನು ಅವಲೋಕನ ಮಾಡಬೇಕು. ಏಕೆಂದರೆ ಬೆವರಿನಿಂದಲೇ ಒಟ್ಟು ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟಲಾಗಿದೆ. ಈ ನಿಟ್ಟಿನಲ್ಲಿ ಇತರರು ಅಪ್ರಮುಖರು ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಅಧ್ಯಯನ, ಬದ್ಧತೆ, ಸಂಕಲ್ಪದಿಂದ ಎತ್ತರಕ್ಕೆ ಏರಲು ಸಾಧ್ಯವಿದೆ. ಮೂರನೆಯ ತರಗತಿಯನ್ನು ಓದಿದ ಡಾ. ರಾಜ್‍ಕುಮಾರ್ ಗುರಿ ಸಾಧನೆ ಮಾಡಲು ಅವರ ಬದ್ಧತೆಯೇ ಕಾರಣ ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಬರಗೂರು ಪ್ರತಿಷ್ಠಾನ ವತಿಯಿಂದ ರಾಜ್ಯಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿಯನ್ನು ವೈಚಾರಿಕ ಕೃತಿ ವಿಭಾಗದಲ್ಲಿ ಎಚ್.ಟಿ. ಪೋತೆ ಮತ್ತು ಕೇಶವ ಶರ್ಮ ಕೆ. ಹಾಗೂ ಕಾದಂಬರಿ ವಿಭಾಗದಲ್ಲಿ ಮಲ್ಲಿಕಾರ್ಜುನ ಹಿರೇಮಠ ಅವರಿಗೆ ನೀಡಲಾಯಿತು.
ಜನರ ಒಳಿತನ್ನು ಬಯಸುವವರು ಭಿನ್ನಾಭಿಪ್ರಾಯಗಳಿಂದ ಬೇರೆಯಾಗುತ್ತಿದ್ದಾರೆ. ಒಂದೇ ಯೋಚನೆಯಲ್ಲಿ ಇರುವವರು ಭಿನ್ನಾಭಿಪ್ರಾಯವನ್ನು ಹೊಂದಿ ಚದುರಿದ ಕಾರಣದಿಂದ ಬಲಪಂಥೀಯರು ಒಂದಾದರು. ಈ ಬಲಪಂಥೀಯ ಶಕ್ತಿಗಳು ಒಂದಾದ ಪರಿಣಾಮವೇ ಇಂದಿನ ಪಂಚರಾಜ್ಯ ಚುನಾವಣೆಗಳ ಫಲಿತಾಂಶವಾಗಿದೆ.
-ಎಚ್.ಎಸ್. ರಾಘವೇಂದ್ರ ರಾವ್, ವಿಮರ್ಶಕ







