ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ- ಯು.ಕೆ. ಮೋನು

ಕೊಣಾಜೆ: ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭವಾಗಿ ಆರು ವರ್ಷ ಕಳೆದಿದ್ದು ಬಡವರ್ಗದ ಜನರಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಇಂತಹ ಅರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿಕೊಂಡು ನೆರವಾಗುತ್ತಿದೆ. ಇಲ್ಲಿಗೆ ಹಾಸನ, ಕೊಡಗು, ಹುಬ್ಬಳ್ಳಿ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗದ ರೋಗಿಗಳಿಗೆ ತಪಾಸಣೆ ಮಾಡುವ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ ಹಿಂಜರಿಯುವ ಜನರ ಅಸಹಾಯಕತೆ ಮನಗಂಡು ತಪಾಸಣೆ ಹಾಗೂ ಒಂದು ತಿಂಗಳ ಕಾಲ ಉಚಿತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ದುಬಾರಿಯಾಗಬಹುದು ಅಂತ ಅನಿಸಿದರೂ ಕಣಚೂರು ಸಂಸ್ಥೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಹಾಗೂ ಮದ್ದು ವಿತರಣೆ ಮಾಡಲು ಸದಾ ಸಿದ್ಧವಾಗಿದೆ ಎಂದು ಕಣಚೂರು ಮೆಡಿಕಲ್ ಕಾಲೇಜು ವೈದ್ಯಕೀಯ ಆಸ್ಪತ್ರೆಯ ಕಣಚೂರು ಮೋನು ಅವರು ಹೇಳಿದರು.
ಅವರು ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವತಿಯಿಂದ ಫೆ. 28 ರಿಂದ ಮಾ.31 ರ ವರೆಗೆ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದ ಬಗ್ಗೆ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ ಮಾತನಾಡಿ ರಕ್ತದ ಬಹಳಷ್ಟು ಅವಶ್ಯಕತೆ ಇದ್ದು ಒಂದು ಹಂತದಲ್ಲಿ ನಮ್ಮಲ್ಲಿ ನೂರು ಯುನಿಟ್ ಅಗತ್ಯವಿರುವಲ್ಲಿ ಕೇವಲ 25ಯುನಿಟ್ ರಕ್ತ ಲಭ್ಯತೆ ಇದ್ದು ಜನರು ರಕ್ತದಾನದ ಅನಿವಾರ್ಯತೆ ಮನಗಂಡು ರಕ್ತದಾನ ಮಾಡಬೇಕು ಎಂದರು.
ಎಐಕೆಎಂಸಿ ಅಧ್ಯಕ್ಷ ಮಹಮ್ಮದ್ ಹನೀಫ್ ರಕ್ತದಾನ ಹಾಗೂ ನಗರದ ವಿವಿಧ ಆಸ್ಪತ್ರೆಗಳೊಂದಿಗೆ ಎಐಕೆಎಂಸಿಯ ಸಹಕಾರದ ಕುರಿತಾಗಿ ಮಾತನಾಡಿದರು.
ಆಡಳಿತಾಧಿಕಾರಿ ಡಾ. ರೋಹನ್ ಮೋನಸ್ ಮಾತನಾಡಿ ಕಣಚೂರು ಆಸ್ಪತ್ರೆಯಲ್ಲಿ ಫೆ.28ರಿಂದ ಮಾ.31 ರ ತನಕ ಆಯೋಜಿಸಲಾಗಿರುವ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದಡಿಯಲ್ಲಿ ಒಳರೋಗಿಯಾಗಿ ದಾಖಲಾಗುವ ಹಾಗೂ ಸಾಮಾನ್ಯ ವಾರ್ಡಿನಲ್ಲಿ ಒಳ ರೋಗಿಯಾಗಿ ದಾಖಲಾಗುವ ರೋಗಿಗಳಿಗೆ ಸಾಮಾನ್ಯ ಹೆರಿಗೆ, ಸಿಸೇರಿಯನ್, ಗರ್ಭಕೋಶದ ಶಸ್ತ್ರಚಿಕಿತ್ಸೆ ಸೇರಿದಂತೆ ಬಹಳಷ್ಟು ಚಿಕಿತ್ಸೆಗಳು ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದರು.
ಸಮಾಜ ಸೇವಕ ಮಾಧವ ಬಗಂಬಿಲ, ಕಣಚೂರು ಸಂಸ್ಥೆ ಸಲೀಂ ಹಾಂದೇಲ್ ಮೊದಲಾದವರು ಉಪಸ್ಥಿತರಿದ್ದರು. ಡಾ. ಮೇಘನಾ ಕಾರ್ಯಕ್ರಮ ನಿರೂಪಿಸಿದರು.