ಉಡುಪಿ: ತಲ್ಲೂರು ಶಿವರಾಮ ಶೆಟ್ಟಿ ಕೃತಿಗೆ ಜಾನಪದ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ

ಉಡುಪಿ : ಉಡುಪಿಯ ತಲ್ಲೂರು ಶಿವರಾಮ ಶೆಟ್ಟಿ ಅವರ ‘ಕಲಾ ಸಂಚಯ ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’ ಕೃತಿ ೨೦೨೦ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿ ೨೦೨೦ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ರಾಜ್ಯದ ಮೂವರ ಕೃತಿಗಳನ್ನು ಆಯ್ಕೆ ಮಾಡಿದ್ದು, ಇವುಗಳಲ್ಲಿ ಜಿಲ್ಲೆಯ ಖ್ಯಾತ ಉದ್ಯಮಿಯೂ ಆಗಿರುವ ತಲ್ಲೂರು ಅವರ ಕೃತಿಯೂ ಒಂದಾಗಿದೆ. ಉಳಿದಂತೆ ಡಾ.ಚನ್ನಪ್ಪ ಕಟ್ಟಿ ಅವರ ‘ಅಮೋಘ ಸಿದ್ಧ ಜನಪದ ಮಹಾಕಾವ್ಯ’ ಹಾಗೂ ಸುರೇಶ್ ನಾಗಲಮಡಿಕೆ ಅವರ ‘ಹಾಡು ಕಲಿಸಿದ ಹರ’ ಕೃತಿಯೂ ಸೇರಿವೆ.
ಪುಸ್ತಕ ಬಹುಮಾನವು ತಲಾ 25000 ರೂ. ನಗದನ್ನು ಒಳಗೊಂಡಿದ್ದು, ಎಪ್ರಿಲ್ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುವ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಪುಸ್ತಕ ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ತಲ್ಲೂರಿನವರಾದ ಶಿವರಾಮ ಶೆಟ್ಟಿ ಅವರು ಹೊಟೇಲ್ ಉದ್ಯಮಿಯಾಗಿದ್ದರೂ ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲೂ ಸಕ್ರೀಯರಾಗಿದ್ದಾರೆ. ಯಕ್ಷಗಾನ ಕಲಾರಂಗ ಹಾಗೂ ರಂಗಭೂಮಿ ಉಡುಪಿ ಇವುಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ತಲ್ಲೂರು ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘ ಹಾಗೂ ಜಾನಪದ ಪರಿಷತ್‌ನ ಜಿಲ್ಲಾದ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.