ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿಗೆ ಸಿ.ಎಂ.ಇಬ್ರಾಹೀಂ ಪತ್ರ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹೀಂ ತಿಳಿಸಿದ್ದಾರೆ.
ಕಳೆದ 12 ವರ್ಷಗಳಿಂದ ತಮಗೆ ಹಲವಾರು ಪತ್ರಗಳನ್ನು ಬರೆದಿದ್ದೇನೆ. ಪಕ್ಷಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಮ್ಮ ಮುಂದಿಟ್ಟಿದ್ದೇನೆ. ಅದಕ್ಕೆ ಪ್ರತಿಯಾಗಿ ತಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಉತ್ತರಿಸಿದ್ದೀರಾ. ಆದರೂ, ನಾನು ಯಾವುದೆ ಬದಲಾವಣೆಯನ್ನು ಕಂಡಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆ ನಡೆಸಿದ್ದಲ್ಲಿ ಅಥವಾ ನಮ್ಮ ಪಕ್ಷದ ಎಲ್ಲ ವಿಧಾನಪರಿಷತ್ತಿನ ಸದಸ್ಯರ ಅಭಿಪ್ರಾಯ ಪಡೆದಿದ್ದರೆ, ಖಂಡಿತವಾಗಿಯೂ 18 ಮಂದಿ ಸದಸ್ಯರು ನನಗೆ ಬೆಂಬಲ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಪಕ್ಷವು ವಿಧಾನಪರಿಷತ್ತಿನಲ್ಲಿ ಅತೀ ಕಿರಿಯ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯನಿರ್ವಹಣೆ ಹಾಗೂ ಸಂಘಟನೆ ವಿಚಾರದಲ್ಲಿ ನಾನು ಧ್ವನಿ ಎತ್ತಿದಾಗ, ನನಗೆ ಯಾವುದೆ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಪಕ್ಷದ ಓರ್ವ ಹಿರಿಯ ನಾಯಕನಾಗಿದ್ದರೂ ನೇರವಾಗಿ ತಮ್ಮನ್ನಾಗಲಿ, ರಾಹುಲ್ ಗಾಂಧಿ ಅವರನ್ನಾಗಲಿ ಭೇಟಿಯಾಗಿ ವಾಸ್ತವ ಪರಿಸ್ಥಿತಿಯನ್ನು ಮುಂದಿಡಲು ಅವಕಾಶವೆ ಸಿಕ್ಕಿಲ್ಲ. ಉಸ್ತುವಾರಿ ಕಾರ್ಯದರ್ಶಿಗಳ ಮೂಲಕ ವಿಚಾರಗಳನ್ನು ಮುಂದಿಡಬೇಕು. ಅವರುಗಳು ಎಷ್ಟರ ಮಟ್ಟಿಗೆ ಇದಕ್ಕೆ ಸ್ಪಂದಿಸುತ್ತಾರೆ ಎಂಬುದನ್ನು ನಾನು ವಿವರಿಸಿ ಹೇಳಬೇಕಿಲ್ಲ ಎಂದು ಇಬ್ರಾಹೀಂ ತಿಳಿಸಿದ್ದಾರೆ.







