ಖಾದರ್ ವಿರುದ್ಧ ಸಂತೋಷ್ ಶೆಟ್ಟಿ ಆರೋಪಗಳು ಎಳ್ಳಷ್ಟು ಸರಿಯಲ್ಲ : ಸದಾಶಿವ ಉಳ್ಳಾಲ್

ಸದಾಶಿವ ಉಳ್ಳಾಲ್
ಉಳ್ಳಾಲ : ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂತೋಷ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಹಾಗೂ ಶಾಸಕ ಯುಟಿ ಖಾದರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಟೀಕಿಸಿದ್ದು ಎಳ್ಳಷ್ಟು ಸರಿಯಲ್ಲ, ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 28 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದು ಏನು ಆಗಿಲ್ಲ. ಖಾದರ್ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಈ ಕಾರಣದಿಂದ ಸಬ್ ಕೆ ಸಾಥ್ ಸಾಬ್ ಕಾ ವಿಕಾಸ್ ಗೆ ಮನ ಸೋತು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದು ಸಂತೋಷ್ ಶೆಟ್ಟಿಯವರ ವೈಯಕ್ತಿಕ ಅಭಿಪ್ರಾಯ. ಸಂತೋಷ್ ರವರು ಶಾಸಕ ಯುಟಿ ಖಾದರ್ ವಿರುದ್ಧ ಆರೋಪ ಮಾಡುವ ಮೊದಲು ಅವರ ಸಾಧನೆ ನಾವು ಗುರುತಿಸಬೇಕಿತ್ತು. ಇವ್ಯಾವುದನ್ನು ಮಾಡದೇ ಸಂತೋಷ್ ಕುಮಾರ್ ಶೆಟ್ಟಿ ಶಾಸಕ ಯುಟಿ ಖಾದರ್ ಕೋಮುವಾದದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಸರಿಯಲ್ಲ ಎಂದರು.
ಕಾಂಗ್ರೆಸ್ ತನಗೆ ಏನು ಕೊಟ್ಟಿಲ್ಲ ಎಂದು ಸಂತೋಷ್ ಶೆಟ್ಟಿ ಮಾಡಿರುವ ಆರೋಪ ಸರಿಯಲ್ಲ. ಅವರಿಗೆ ಕಾಂಗ್ರೆಸ್ ನಿಂದ ಏನೆಲ್ಲಾ ಸಿಗಬೇಕೋ ಅದನ್ನೆಲ್ಲ ನೀಡಲಾಗಿದೆ. ಸಂತೋಷ್ ಕುಮಾರ್ ಶೆಟ್ಟಿ ಯುವಕನಾಗಿದ್ದಾಗ ಮೊತ್ತ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿ ಕೊಟ್ಟಿದ್ದರು. ಸ್ಪರ್ಧೆಯಲ್ಲಿ ಅವರು ಸೋತಿದ್ದರು. ಇದರ ಬಳಿಕ ಎಪಿಎಂಸಿ ಸದಸ್ಯರನ್ನಾಗಿ, ಕೆಎಸ್ ಅರ್ ಟಿಸಿ ನಿರ್ದೇಶಕರನ್ನಾಗಿ ಮಾಡಿದ್ದರು. ಸ್ಯಾಂಡ್ ಮಾರಾಟ ಪರವಾನಗಿ ನೀಡಿದ್ದರು. ಅವರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವಾಗ ಈಶ್ವರ್ ಉಳ್ಳಾಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಇವರಿಗೆ ಅಧಿಕಾರ ನೀಡಲಾಗಿತ್ತು. ಆದರೂ ಈಶ್ವರ ಉಳ್ಳಾಲ್ ಬೇಸರ ವ್ಯಕ್ತಪಡಿಸದೆ ಇಂದಿಗೂ ಪಕ್ಷಕ್ಕಾಗಿ ಅವಿರತ ದುಡಿಯುತ್ತಿದ್ದಾರೆ. ಇದನ್ನೆಲ್ಲ ಅವರು ಮರೆತು ಬಿಟ್ಟಿದ್ದಾರೆ ಎಂದರು.
ನಾನು 40 ವರ್ಷ ಕಾಂಗ್ರೆಸ್ ನಲ್ಲಿ ದುಡಿದಿದ್ದೇನೆ. ಈ ನಡುವೆ ಒಬ್ಬನನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ರಾಜ್ಯ ಮಟ್ಟದ ಖೋಟಾ ದಲ್ಲಿ ಉಳ್ಳಾಲ ವಲಯ ಕಾಂಗ್ರೆಸ್ ಸದಸ್ಯರು ಬರಲು ಶಾಸಕ ಖಾದರ್ ಕಾರಣ ಎಂದು ಸದಾಶಿವ ಉಳ್ಳಾಲ್ ಹೇಳಿದರು.
ಆಸ್ಪತ್ರೆ, ಕುಡಿಯುವ ನೀರು ಇನ್ನಿತರ ಕಾರ್ಯಗಳು ಯುಟಿ ಖಾದರ್ ರವರ ಮುತುವರ್ಜಿ ಯಿಂದ ಆಗಿದೆ. ಅಲ್ಲದೇ ವಿಶೇಷ ಅನುದಾನ ತರಿಸಿ ಕಾಮಗಾರಿ ಮಾಡಿದ್ದಾರೆ. ಉಳ್ಳಾಲ ತಾಲೂಕು ರಚನೆಯಾಗಲು ವಿವಿಧ ಇಲಾಖೆಗಳು ಬರಲು ಕಾರಣ ಶಾಸಕ ಯುಟಿ ಖಾದರ್ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಕುಟುಂಬ ರಾಜಕಾರಣ ಮಾಡಿಲ್ಲ. ಸಂತೋಷ್ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಸಂದರ್ಭದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ. ಪಕ್ಷಕ್ಕಾಗಿ ನೀಡಿದ ಕೊಡುಗೆ ಏನು ಎಂಬುವುದನ್ನು ತಿಳಿಸಲಿ ಎಂದರು.
ಸುರೇಶ್ ಭಟ್ನಗರ್ ಮಾತನಾಡಿ, ಸಂತೋಷ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಖಾದರ್ ವಿರುದ್ಧ ಆರೋಪ ಹೊರಿಸಿದ್ದಾರೆ. ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂಘಟನೆ ಎಂದಿರಲಿಲ್ಲ. ನಾನು ಆ ಕಾಲದಲ್ಲಿ ಉಪಾಧ್ಯಕ್ಷ ಆಗಿದ್ದೆ. ಪಕ್ಷದ ನೆಲೆಯಲ್ಲಿ ಅವರ ಕಾರ್ಯ ವೈಖರಿ ಇರಲಿಲ್ಲ. ಅವರು ಬಿಜೆಪಿಗೆ ಹೋದರೆ ಅವರಿಗೇನು ಲಾಭ ಇಲ್ಲ. ಸಂತೋಷ್ ರವರು ಟೀಕೆ ಮಾಡಿದ ಹಾಗೆ ಬಿಜೆಪಿ ಯವರು ಖಾದರ್ ರನ್ನು ಟೀಕೆ ಮಾಡಲಿಲ್ಲ. ಖಾದರ್ ಬಗೆ ಭ್ರಷ್ಟಾಚಾರ ಎಂಬ ನೆಲೆಯಲ್ಲಿ ಯಾರಿಗೂ ಪರಿಚಯ ಆಗಿಲ್ಲ. ಅವರ ಜನ ಸೇವೆ ಗುರುತಿಸಿ ಜನತೆಗೆ ಪರಿಚಯ ಆಗಿದೆ .ಈ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಮಾಡುವುದು ಎಷ್ಟು ಸರಿ. ಇದು ಸಂತೋಷ್ ಕುಮಾರ್ ಶೆಟ್ಟಿ ಯ ಸಂಸ್ಕೃತಿ ಕೂಡಾ ಅಲ್ಲ. ಪಕ್ಷಕ್ಕೆ ಹಿನ್ನಡೆ ಮುನ್ನಡೆ ಸಹಜ. ಅದು ಒಬ್ಬ ಕಾರ್ಯಕರ್ತರಿಂದ ಆಗುವುದಲ್ಲ. ಕೋಟೆಕಾರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾಲ್ಕು ಸ್ಥಾನ ಪಡೆದಿದ್ದೇವೆ. ಮತ ಕೂಡಾ ಜಾಸ್ತಿ ಸಿಕ್ಕಿದೆ.ಹಿನ್ನೆಡೆ ಆಗಿಲ್ಲ ಎಂದರು.
ಯುಟಿ ಖಾದರ್ ಅವರನ್ನು ಟೀಕೆ, ಆರೋಪ ಮಾಡುವ ನೈತಿಕತೆ ಸಂತೋಷ್ ಶೆಟ್ಟಿ ಅಸೈಗೋಳಿಗೆ ಇಲ್ಲ. ಖಾದರ್ ಅವರು ಸ್ವಾರ್ಥಿ ಭ್ರಷ್ಟಾಚಾರಿ ಎಂದು ಸಂತೋಷ್ ಶೆಟ್ಟಿಗೆ ಗೊತ್ತಿದ್ದರೆ ಅವರಿಗೆ ಮೊದಲೇ ಪಕ್ಷ ಬಿಟ್ಟು ಹೋಗಬಹುದಿತ್ತು. ಇದೀಗ ಅವರು ಕಾಂಗ್ರೆಸ್ ನಲ್ಲಿ ಎಲ್ಲಾ ಸ್ಥಾನ ಪಡೆದು ಕೊನೆಗೆ ಉಂಡ ಮನೆಗೆ ದ್ರೊಹ ಬಗೆದಿದ್ದಾರೆ. ಈ ಹಿಂದೆ ಸಂತೋಷ್ ಅವರು ಪುತ್ತೂರು ನಲ್ಲಿ ಬಿಜೆಪಿ ಸೇರಲು ಪ್ರಯತ್ನಿಸಿದ್ದರು. ಈ ವೇಳೆ ಸಂಸದ ನಳಿನ್ ಅವರು ಸ್ವಲ್ಪ ಕಾಲ ಕಾಂಗ್ರೆಸ್ ನಲ್ಲಿರಿ ಎಂದು ಹೇಳಿದ್ದರು. ಇದೀಗ ಎರಡನೇ ಬಾರಿ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಆದರೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪಕ್ಷ ಸೇರಬೇಕಾಗಿಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಅವರು 'ವಾರ್ತಾ ಭಾರತಿ'ಗೆ ಕರೆ ಮಾಡಿ ತಿಳಿಸಿದರು.
ಉಳ್ಳಾಲ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್ ಈ ಬಗ್ಗೆ ಮಾತನಾಡಿದರು.
ಇದಕ್ಕೂ ಮೊದಲು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಸಂತೋಷ್ ಶೆಟ್ಟಿ ಅವರು ಯು.ಟಿ. ಖಾದರ್ ವಿರುದ್ಧ ಆರೋಪ ಮಾಡಿ, ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದರು.
ಶಾಸಕ ಯು.ಟಿ. ಖಾದರ್ ಅವರ ಕಾರ್ಯವೈಖರಿಗೆ ಬೇಸತ್ತು ಮಾ.13ರಂದು ನೂರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದೇನೆ. ಯು.ಟಿ. ಖಾದರ್ ಅವರು ಸುಮಾರು 6 ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಉಳಿಯುವಂತಹ ಯಾವುದೇ ಶಾಶ್ವತ ಯೋಜನೆ ಜಾರಿಗೆ ತಂದಿಲ್ಲ ಎಂದು ಆರೋಪಿಸಿದ್ದಾರೆ.







