2 ತಿಂಗಳಲ್ಲಿ ಎಲ್ಲ ಮನೆಗಳಿಗೂ ಶಾಶ್ವತ ದಾಖಲೆ ವಿತರಣೆ: ರಘುಪತಿ ಭಟ್
ಉಡುಪಿಯಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ

ಉಡುಪಿ : ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ಎರಡು ತಿಂಗಳ ಒಳಗೆ ಎಲ್ಲ ಮನೆಗಳಿಗೂ ಶಾಶ್ವತ ದಾಖಲೆಗಳನ್ನು ತಲುಪಿಸುವ ಕಾರ್ಯ ನಡೆಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ ಶನಿವಾರ ತೆಂಕನಿಡಿ ಯೂರು ಗ್ರಾಪಂ ವ್ಯಾಪ್ತಿಯಲ್ಲಿನ ರೈತರ ಮನೆಗಳಿಗೆ, ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತೆರಳಿ ವಿತರಿಸಿ, ನಂತರ ತೆಂಕನಿಡಿಯೂರು ಗ್ರಾಪಂ ಸಭಾಭವನ ದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾರ್ವಜನಿಕರಿಗೆ ಕಂದಾಯ ಇಲಾಖೆ ವ್ಯಾಪ್ತಿಯ ಎಲ್ಲಾ ಸೇವೆಗಳನ್ನು ಸಮರ್ಪಕವಾಗಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ, ಸಕಾಲದಲ್ಲಿ ಒದಗಿಸುವ ಮೂಲಕ, ಕಂದಾಯ ಸಮಸ್ಯೆಗಳನ್ನು ಸಮರ್ಪಕ ರೀತಿಯಲ್ಲಿ ಬಗೆಹರಿಸಲು, ಅಧಿಕಾರಿಗಳು ಪ್ರಾಮಾಣಿಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಈ ಯೋಜನೆಯು ಸಾರ್ವಜನಿಕರಿಗೆ ಬಹುಪಯೋಗಿ ಮತ್ತು ದೂರದೃಷ್ಠಿ ಹೊಂದಿರುವ ಜನಪರ ಕಾರ್ಯಕ್ರಮವಾಗಿದ್ದು, ದೇಶದಲ್ಲೇ ಪ್ರಥಮವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವುದರ ಮೂಲಕ ಸಾರ್ವಜನಿಕರಿಗೆ ಸರಕಾರದ ವಿವಿಧ ಯೋಜನೆಗಳು ಮತ್ತು ಸೇವೆ ಗಳನ್ನು ಉತ್ತಮ ರೀತಿಯಲ್ಲಿ ತಲುಪಿಸಲು ಸಾಧ್ಯವಾಗಲಿದೆ. ಉಡುಪಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಕಡತ ವಿಲೇವಾರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಹಲವು ವರ್ಷಗಳಿಂದ ಬಾಕಿ ಇರುವ ಸಾರ್ವಜನಿಕರ ಕಡತಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ನಿಗಧಿತ ಶುಲ್ಕ ಪಾವತಿ ಮತ್ತು ಕಾಯುವ ಪರಿಸ್ಥಿತಿ ಇತ್ತು. ಆದರೆ ಈ ಯೋಜನೆಯ ಮೂಲಕ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಟ್ಲಾಸ್/ ಹಿಸ್ಸಾ ಸ್ಕೆಚ್‌ಗಳನ್ನು ಉಚಿತವಾಗಿ ತಲುಪಿಸಲಾಗುತ್ತಿದೆ. ಈಗ ನೀಡಲಾಗುತ್ತಿರುವ ದಾಖಲಾತಿಗಳಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಸಹ ಅವಕಾಶವಿದೆ ಎಂದು ತಿಳಿಸಿದರು.
ಬಹುತೇಕ ಸಾರ್ವಜನಿಕರು ತಮಗೆ ಸಂಬಂಧಿಸಿದ ಕಂದಾಯ ದಾಖಲೆಗಳು ಇರುವ ಬಗ್ಗೆ ಮಾಹಿತಿ ಇಲ್ಲದೆ, ವ್ಯಾಜ್ಯದ ಸಂದರ್ಭದಲ್ಲಿ ನ್ಯಾಯಾಲಯಗಳಲ್ಲಿ ತೊಂದರೆಗೀಡಾಗಬೇಕಾದ ಪರಿಸ್ಥಿತಿಗಳಿವೆ. ಈ ಯೋಜನೆಯ ಮೂಲಕ ಅತ್ಯವಶ್ಯಕ ಅಗತ್ಯ ದಾಖಲೆಗಳನ್ನು ಉಚಿತವಾಗಿ, ಮನೆ ಬಾಗಿಲಿನಲ್ಲಿಯೇ ಪಡೆಯಲು ಸಾಧ್ಯವಾಗಿದೆ. ಜಿಲ್ಲೆಯ ೨೬೭ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ದಾಖಲೆಗಳನ್ನು ವಿತರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ ಸುರೇಶ್, ಉಪಾಧ್ಯಕ್ಷ ಅರುಣ್ ಜತ್ತನ್ನ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಉಡುಪಿ ತಹಸೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
8206 ಮಂದಿಗೆ ಕಂದಾಯ ದಾಖಲೆ ವಿತರಣೆ
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ ಉಡುಪಿ ಜಿಲ್ಲೆ ಯಾದ್ಯಂತ ಒಟ್ಟು 8206 ಮಂದಿಗೆ ಇಂದು ಮನೆ ಬಾಗಿಲಿಗೆ ಕಂದಾಯ ಸೇವೆಯನ್ನು ವಿತರಿಸಲಾಯಿತು.
ಕಾಪು ತಾಲೂಕಿನಲ್ಲಿ 1149, ಬ್ರಹ್ಮಾವರ- 1568, ಉಡುಪಿ- 1091, ಬೈಂದೂರು- 759, ಕಾರ್ಕಳ- 1150, ಕುಂದಾಪುರ- 1975, ಹೆಬ್ರಿ ತಾಲೂಕಿ ನಲ್ಲಿ 514 ಮಂದಿಗೆ ಸೇವೆಯನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
