ಮಾ.15ರಂದು ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಪಾದಯಾತ್ರೆ

ಉಡುಪಿ : ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ದೊಡ್ಡ ಹೊರೆಯಾಗಿರುವ ಹೆಜಮಾಡಿ ಟೋಲ್‌ನಿಂದ ಕೇವಲ 9 ಕಿ.ಮೀ. ಅಂತರದಲ್ಲಿ ರುವ ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಾ.15ರಂದು ಪಾದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಅಮೃತ್ ಶೆಣೈ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ೬೦ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆ ಗಳು, ಸಾಮಾಜಿಕ ಸಂಘಸಂಸ್ಥೆಗಳು, ಸಾರಿಗೆ ರಂಗದ ಯೂನಿಯನ್‌ಗಳು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್‌ಗೇಟ್‌ವರೆಗೆ ಪಾದ ಯಾತ್ರೆ ನಡೆಸಲಿದ್ದು, ಇದರಲ್ಲಿ ಸುಮಾರು 5000 ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಸಂಬಂಧಿಸಿ ವಿಳಂಬ ಧೋರಣೆ ಅನು ಸರಿಸುತ್ತಿರುವ ಸರಕಾರಗಳು ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯಾಗಿ ಈ ಹೋರಾಟ ನಡೆಸುತ್ತಿದ್ದು, ತೆರವು ಬೇಡಿಕೆ ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳ ದಿದ್ದಲ್ಲಿ ಮುಂದೆ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಸ್ ಮಾಲಕರೂ ಆಗಿ ರುವ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, ಸುರತ್ಕಲ್ ಟೋಲ್‌ಗೇಟ್ ಒಂದರಲ್ಲಿ ತಿಂಗಳಿಗೆ ಸಣ್ಣ ಬಸ್‌ಗಳು 9000 ರೂ. ಹಾಗೂ ದೊಡ್ಡ ಬಸ್‌ಗಳು 18 ಸಾವಿರ ರೂ. ಟೋಲ್ ಪಾವತಿಸಬೇಕಾಗುತ್ತದೆ. ಈ ಹೊರೆ ಪ್ರಯಾಣಿಕರ ಮೇಲೆ ಭರಿಸಲಾಗುತ್ತಿದೆ. ಆದುದರಿಂದ ಬಸ್ ಮಾಲಕರ ಸಂಘಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಆದರೆ ಆ ದಿನ ಯಾವುದೇ ಬಸ್ ಬಂದ್ ಇರುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ಯಾಕ್ಸಿಮೆನ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ರಮೇಶ್ ಕೋಟ್ಯಾನ್, ವೆಲ್‌ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್, ಜೆಡಿಎಸ್‌ನ ಗಂಗಾಧರ ಬಿರ್ತಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.